Tuesday, September 23, 2025

SHOCKING | ಶಿರಸಿಯಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಯುವತಿ ಸಾವು

ಹೊಸ ದಿಗಂತ ವರದಿ,ಶಿರಸಿ:

ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಮಲಗಿದ್ದ ಯುವತಿಯೊರ್ವಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುರ್ಕಿನಕೊಡ್ಲಿನಲ್ಲಿ ಮಂಗಳವಾರ ನಡೆದಿದೆ.

ಶಿರಸಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬಿಒ ಅಂತಿಮ ವರ್ಷದಲ್ಲಿ ಓದುತ್ತಿದ್ದ ರಂಜನಾ ದೇವಡಿಗ ( 21 ) ಮೃತಪಟ್ಟ ದುರ್ದೈವಿ. ನಾಗಪ್ಪ ಹಾಗೂ ನಾಗವೇಣಿ ದೇವಡಿಗ ದಂಪತಿಯ ಸಾಕು ಪುತ್ರಿ ಇವಳಾಗಿದ್ದು, ಮನೆಯಲ್ಲಿ ಮಧ್ಯಾಹ್ನ ಮನಗಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.‌

ಮೃತ ರಂಜನಾ ತಲೆನೋವಿನ ಕಾರಣ ಮಂಗಳವಾರ ಕಾಲೇಜಿಗೆ ರಜಾ ಮಾಡಿದ್ದಳು. ತಂದೆ ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದರು. ಹೀಗಾಗಿ ಊಟ ಮಾಡಿ ಮನಗಿದ್ದ ರಂಜನಾ ಸ್ಪೋಟಕ್ಕೆ ಬಲಿಯಾಗಿದ್ದು, ಬೆಂಕಿಯ ಕೆನ್ನಾಲೆಗೆ ಸಂಪೂರ್ಣ ದೇಹ ಸುಟ್ಟು ಮುದ್ದೆಯಾಗಿದೆ. ಮನೆಯೂ ಸಹ ಬಿರುಕು ಬಿಟ್ಟಿದ್ದು, ಅಡುಗೆ ಮನೆಯ ಪಕಾಸಿ, ಹಂಚು ಸ್ಪೋಟದ ತೀವ್ರತೆಗೆ ಹಾರಿ ಹೋಗಿದೆ.

ಸ್ಪೋಟದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಓಡಿ ಬಂದು ಮನೆ ಬಾಗಿಲು ಒಡೆದಿದ್ದಾರೆ. ಬಳಿಕ ಅಗ್ನಿ ಶಾಮಕದವರು ಆಗಮಿಸಿದ್ದಾರೆ. ಆದರೆ ಅಷ್ಟದರೊಳಗೆ ಯುವತಿ ಮೃತಪಟ್ಟದ್ದಾಳೆ. ಬಳಿಕ ಬೆಂಕಿ ನಂದಿಸಲಾಗಿದ್ದು, ಮನೆ ಸುಟ್ಟ ಪರಿಣಾಮ ಲಕ್ಷಾಂತರ ರೂ ಸಹ ನಷ್ಟವಾಗಿದೆ.

ಇನ್ನು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಾವಿನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇಟಗುಳಿ ಗ್ರಾಮ ಪಂಚಾಯತ ಸದಸ್ಯೆ ಗೀತಾ ಭೋವಿ ಸ್ಥಳದಲ್ಲೇ ಇದ್ದು ಎಲ್ಲಾ ಕಾರ್ಯಗಳಿಗೆ ಸಹಕರಿಸಿದರು. ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ