ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಎಚ್-1ಬಿ ವೀಸಾ ಶುಲ್ಕದ ಕುರಿತಾದ ಗೊಂದಲಕ್ಕೆ ಶ್ವೇತಭವನ ತೆರೆ ಎಳೆದಿದ್ದು, ಉದ್ದೇಶಿತ 1 ಲಕ್ಷ ಡಾಲರ್ ಶುಲ್ಕವು ಕೇವಲ ಹೊಸ ಅರ್ಜಿದಾರರಿಗೆ ಮಾತ್ರ ಅನ್ವಯಿಸುತ್ತದೆ, ಅಸ್ತಿತ್ವದಲ್ಲಿರುವ ವೀಸಾ ಹೊಂದಿರುವವರಿಗೆ ಅಲ್ಲ ಅಂತ ಅಮೆರಿಕ ಸರ್ಕಾರ ಹೇಳಿದೆ. ಅಷ್ಟೇ ಅಲ್ಲ, ಇದು ವಾರ್ಷಿಕ ಶುಲ್ಕವಲ್ಲ, ಬದಲಾಗಿ ಒಂದು ಬಾರಿಯ ಪಾವತಿಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 19 ರಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲಟ್ನಿಕ್ ಅವರು ಎಚ್-1ಬಿ ವೀಸಾಗಳಿಗೆ 1 ಲಕ್ಷ ಡಾಲರ್ ವಾರ್ಷಿಕ ಶುಲ್ಕ ವಿಧಿಸಲಾಗುವುದು ಎಂದು ಘೋಷಿಸಿದ್ದರು. ಈ ಪ್ರಕಟಣೆಯು ಭಾರತ-ಅಮೆರಿಕ ಸಂಬಂಧಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದ್ದುದರಿಂದ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಕ್ಷಣವೇ ಕಾರ್ಯಪ್ರವೃತ್ತವಾಗಿತ್ತು. ಹೊಸದಿಲ್ಲಿ ಮತ್ತು ವಾಷಿಂಗ್ಟನ್ ಎರಡೂ ಕಡೆಗಳಲ್ಲಿ ಭಾರತೀಯ ಅಧಿಕಾರಿಗಳು ಟ್ರಂಪ್ ಆಡಳಿತದೊಂದಿಗೆ ನಿರಂತರ ಮಾತುಕತೆ ನಡೆಸಿದ್ದರು.
ಇದರ ಫಲವಾಗಿ, ಭಾರತೀಯ ವೃತ್ತಿಪರರಲ್ಲಿನ ಆತಂಕವನ್ನು ಗಮನಿಸಿ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಅವರು ಈ ಕೆಳಗಿನಂತೆ ಸ್ಪಷ್ಟನೆ ನೀಡಿದ್ದಾರೆ.
ಈ ಶುಲ್ಕವು ವಾರ್ಷಿಕವಲ್ಲ, ಬದಲಾಗಿ ವೀಸಾ ಅರ್ಜಿಯ ಮೇಲೆ ವಿಧಿಸಲಾಗುವ ಒಂದು ಬಾರಿಯ ಶುಲ್ಕ ಮಾತ್ರ.
ಈಗಾಗಲೇ ಎಚ್-1ಬಿ ವೀಸಾ ಹೊಂದಿದ್ದು, ಅಮೆರಿಕದ ಹೊರಗಿರುವವರು ಮರಳಿ ಪ್ರವೇಶಿಸಲು 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕಾಗಿಲ್ಲ.
ಈ ನಿಯಮವು ಕೇವಲ ಹೊಸ ವೀಸಾ ಅರ್ಜಿದಾರರಿಗೆ ಮಾತ್ರ ಅನ್ವಯಿಸುತ್ತದೆ. ಅಸ್ತಿತ್ವದಲ್ಲಿರುವ ವೀಸಾ ಹೊಂದಿರುವವರಿಗೆ ಅಥವಾ ವೀಸಾ ನವೀಕರಣಕ್ಕೆ ಇದು ಅನ್ವಯಿಸುವುದಿಲ್ಲ.