ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 75ನೇ ಜನ್ಮದಿನವನ್ನು ಆಚರಿಸಿಕೊಂಡ ಬೆನ್ನಲ್ಲೇ, ಬಿಜೆಪಿ ಹಾಗೂ ಬೃಹತ್ ಸಂಘ ಪರಿವಾರದಲ್ಲಿ ಅಸ್ತಿತ್ವದಲ್ಲಿದೆ ಎನ್ನಲಾದ “ವಯೋಮಿತಿ” ನಿಯಮದ ಕುರಿತ ಚರ್ಚೆಗಳು ಕಾವು ಪಡೆದುಕೊಂಡವು. ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯಂತಹ ಹಿರಿಯ ಮುತ್ಸದ್ದಿಗಳ ನಿವೃತ್ತಿಯನ್ನು ಮಾಧ್ಯಮಗಳು ಮತ್ತು ರಾಜಕೀಯ ವಲಯದ ಗುಸುಗುಸುಗಳು ಎತ್ತಿ ತೋರಿಸಿದವು. “ಮೋದಿಯವರಿಗೆ ಏಕೆ ಒಂದು ಪ್ರತ್ಯೇಕ ನಿಯಮ?” ಎಂದು ವಿಮರ್ಶಕರು ಪ್ರಶ್ನಿಸಿದರು.
ಇವೆಲ್ಲವೂ ಸಮಂಜಸವಾದ ಪ್ರಶ್ನೆಗಳೇ. ಜನ್ಮದಿನದ ಸಂಭ್ರಮಾಚರಣೆಯ ಪೂರ್ವನಿಯೋಜಿತ ಕಾರ್ಯಕ್ರಮಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳು ತೀಕ್ಷ್ಣವಾಗಿದ್ದು, ಸ್ಪಷ್ಟವಾಗಿ ಪರ ಅಥವಾ ವಿರೋಧ ಎಂಬಂತೆ ಇದ್ದವು. ಅವು ಸತ್ಯಾಂಶಗಳು ಮತ್ತು ರಾಜಕೀಯ ಪ್ರವೃತ್ತಿಗಳ ಅವಲೋಕನಕ್ಕಿಂತ ಹೆಚ್ಚಾಗಿ, ಒಂದಲ್ಲ ಒಂದು ಬಗೆಯ ರಾಜಕೀಯ ದೃಷ್ಟಿಕೋನಗಳ ಬಣ್ಣವನ್ನು ಪಡೆದುಕೊಂಡಿದ್ದವು. ಇದೀಗ, ಆ ಮೈಲಿಗಲ್ಲಿನ ಜನ್ಮದಿನವು ಮುಗಿದಿರುವಾಗ, ಒಂದು ತೂಕಬದ್ಧ ವಿಶ್ಲೇಷಣೆಯು ಅಗತ್ಯವಾಗಿ ಬೇಕಿದೆ. ಈ ವಿಶ್ಲೇಷಣೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ಭಾರತದಲ್ಲಿನ ಆಧುನಿಕ ರಾಜಕೀಯ ಸಂಸ್ಕೃತಿಗಳ ಜೊತೆಗೆ, ಮೋದಿಯವರ ವೈಯಕ್ತಿಕ ಕಾರ್ಯಸಾಧನೆಯ ಅಧ್ಯಯನವನ್ನೂ ಒಳಗೊಳ್ಳುತ್ತದೆ.
ಅದು 1990ರ ಅವಧಿ…
1990ರ ದಶಕವು ರಾಜಕೀಯ ಸಂವಹನ ಮತ್ತು ಸಾಂಕೇತಿಕತೆಯಲ್ಲಿ ಒಂದು ಗಮನಾರ್ಹ ಪಲ್ಲಟಕ್ಕೆ ಸಾಕ್ಷಿಯಾಯಿತು. ಶೀತಲ ಸಮರ ಅಂತ್ಯಗೊಂಡಾಗ ಹೊಸ ಆಶಾಕಿರಣವೊಂದು ಮೂಡಿತು, ಆರ್ಥಿಕತೆಯು ನಾಗಾಲೋಟದಲ್ಲಿತ್ತು. ಉದ್ಯಮ ವಲಯ ಮತ್ತು ನಾಗರಿಕ ಸಮಾಜಕ್ಕೆ ವ್ಯಾಪಕ ಸ್ವಾಯತ್ತತೆ ದೊರೆತಿದ್ದ ಆ ಕಾಲಘಟ್ಟದಲ್ಲಿ, ರಾಜಕೀಯವನ್ನು ಕೇವಲ ತಂತ್ರಜ್ಞರ ಕಾರ್ಯಕ್ಷೇತ್ರ ಅಥವಾ ಒಂದು ಗೌಣವಾದ ವಿಚಾರವೆಂದು ಪರಿಗಣಿಸುವ ಪ್ರವೃತ್ತಿ ಹೆಚ್ಚಾಯಿತು. ನಿಸ್ಸಂದೇಹವಾಗಿ, ಇದು ಪಾಶ್ಚಿಮಾತ್ಯ ದೇಶಗಳಿಗೆ ಹೆಚ್ಚು ಅನ್ವಯವಾಗುತ್ತಿತ್ತು. ಆದರೂ, ನಿರೀಕ್ಷೆಯಂತೆಯೇ, ಇದರ ಪ್ರಭಾವವು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಿಗೂ ವ್ಯಾಪಕವಾಗಿ ಹಬ್ಬಿತು.
ಇದರ ಪರಿಣಾಮಗಳಲ್ಲಿ, ಸರ್ಕಾರದಲ್ಲಿ ಯುವಕರಿರುವುದೇ ಒಂದು ಅಂತಿಮ ಗುರಿ ಎಂಬಂತೆ ವೈಭವೀಕರಿಸುವ ಒಂದು ವಯೋಬೇಧದ ಮನೋಭಾವವೂ ಸೇರಿತ್ತು. ಇದು ರಾಜಕಾರಣಿಯೊಬ್ಬರ ವಯಸ್ಸಿಗೆ ಸಂಬಂಧಿಸದ ಸತ್ವಯುತ ಅರ್ಹತೆಗಳಿಗೆ ತುಲನಾತ್ಮಕವಾಗಿ ಕಡಿಮೆ ಮಹತ್ವವನ್ನು ನೀಡಿತು. ಉದಾಹರಣೆಗೆ, ಯುನೈಟೆಡ್ ಕಿಂಗ್ಡಮ್ (ಯುಕೆ) ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ (ಯುಎಸ್), ಒಬ್ಬ ವ್ಯಕ್ತಿಯು ತೀರಾ ಕಡಿಮೆ ಮತ್ತು ಹಾಸ್ಯಾಸ್ಪದ ಎನಿಸುವ ವಯಸ್ಸಿನ ಮಿತಿಯನ್ನು ದಾಟಿದರೆ, ಅವರನ್ನು ಆಯ್ಕೆಯಾಗಬಲ್ಲ ಅಭ್ಯರ್ಥಿ ಎಂದು ನೋಡುವುದೇ ಕಷ್ಟವಾಗಿತ್ತು.
ಕಣ್ಣೆದುರೇ ಇವೆ ಉದಾಹರಣೆ
ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳಿ. ಅಮೆರಿಕದಲ್ಲಿ, ಬಿಲ್ ಕ್ಲಿಂಟನ್ ತಮ್ಮ ಎರಡನೇ ಅವಧಿಯನ್ನು 54ನೇ ವಯಸ್ಸಿಗೆ, ಜಾರ್ಜ್ ಡಬ್ಲ್ಯೂ. ಬುಷ್ 62ಕ್ಕೆ, ಮತ್ತು ಬರಾಕ್ ಒಬಾಮಾ 55ನೇ ವಯಸ್ಸಿಗೆ ಪೂರ್ಣಗೊಳಿಸಿದರು. ಸಹಜವಾಗಿ, ಅಧಿಕಾರಾವಧಿಯ ಮಿತಿಗಳು ಮೂರನೇ ಅವಧಿಗೆ ಅವಕಾಶ ನೀಡಲಿಲ್ಲ, ಆದರೆ ಇಲ್ಲಿನ ದೊಡ್ಡ ವಿಷಯವೆಂದರೆ, ಹೆಚ್ಚು ವಯಸ್ಸಾದ ಪ್ರತಿಸ್ಪರ್ಧಿಯು ಪಕ್ಷದ ಆಂತರಿಕ ಚುನಾವಣೆಯಲ್ಲಿ ಗೆಲ್ಲುವುದೂ ಅಸಾಧ್ಯವಾಗಿತ್ತು. ಇನ್ನೂ ಹೆಚ್ಚಿನ ಕೊಡುಗೆ ನೀಡಬಹುದಾಗಿದ್ದಾಗ, ಇಡೀ ತಲೆಮಾರಿನ ರಾಜಕೀಯ ಪ್ರತಿಭೆಗಳು ವ್ಯರ್ಥವಾದವು ಅಥವಾ ಅವರ ವೃತ್ತಿಜೀವನವು ಅಕಾಲಿಕವಾಗಿ ಅಂತ್ಯಗೊಂಡಿತು. ಯುಕೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಟೋನಿ ಬ್ಲೇರ್ 54ನೇ ವಯಸ್ಸಿಗೆ ನಿವೃತ್ತರಾದರೆ, ಡೇವಿಡ್ ಕ್ಯಾಮರೂನ್ 49ನೇ ವಯಸ್ಸಿನಲ್ಲಿ 10 ಡೌನಿಂಗ್ ಸ್ಟ್ರೀಟ್ ತೊರೆದರು, ಮತ್ತು ರಿಷಿ ಸುನಕ್ 44ನೇ ವಯಸ್ಸಿನಲ್ಲಿ.
ಸಾರ್ವಜನಿಕ ಜೀವನದಲ್ಲಿ ಲಭ್ಯವಿರುವ ಆಡಳಿತಾತ್ಮಕ ಪ್ರತಿಭೆಗಳು ಹೇಗಿದ್ದರೂ ಸೀಮಿತ. ಅದರೊಂದಿಗೆ ಶಾಸನಸಭೆ ಮತ್ತು ಸರ್ಕಾರದಲ್ಲಿನ ವರ್ಷಗಳ ಅನುಭವದಿಂದ ಬರುವ ಹದ ಮತ್ತು ಪ್ರಬುದ್ಧತೆಯನ್ನು ಸೇರಿಸಿದಾಗ, ದೃಶ್ಯಮಾಧ್ಯಮಕ್ಕೆ ಒಪ್ಪುವ, ಮಾಧ್ಯಮ-ಪ್ರೇರಿತ ಯುವ ನಾಯಕತ್ವದ ಗೀಳಿಗೆ ಬಲಿಯಾಗುವ ಮೂಲಕ, ಪಾಶ್ಚಿಮಾತ್ಯ ಜಗತ್ತು ಹೇಗೆ ನಾಯಕತ್ವದ ಬೃಹತ್ ನಷ್ಟವನ್ನು ಅನುಭವಿಸಿತು ಎಂಬುದು ಅರಿವಾಗುತ್ತದೆ.
ಕಾಲಕ್ರಮೇಣ, ಯುಕೆ ಮತ್ತು ಯುಎಸ್ ದೇಶಗಳು ಕೂಡ ತಮ್ಮ ಹಾದಿಯನ್ನು ತಿದ್ದಿಕೊಂಡವು. 1997ರಿಂದ 2013ರ ಅವಧಿಯಲ್ಲಿ, ಅಧಿಕಾರಕ್ಕೆ ಬರುವಾಗ ಅಮೆರಿಕದ ಅಧ್ಯಕ್ಷರ ಸರಾಸರಿ ವಯಸ್ಸು 52 ವರ್ಷಗಳಾಗಿದ್ದರೆ, 2017ರಿಂದ 2025ರ ಅವಧಿಯಲ್ಲಿ ಅದು 75 ವರ್ಷಗಳಿಗೆ ಏರಿಕೆಯಾಯಿತು. 79ನೇ ವಯಸ್ಸಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕ್ಲಿಂಟನ್ ಅವರ ಸಮವಯಸ್ಕರಾಗಿದ್ದು, ಒಬಾಮಾ ಅವರಿಗಿಂತ ಒಂದೂವರೆ ದಶಕದಷ್ಟು ಹಿರಿಯರಾಗಿದ್ದಾರೆ. ಯುಕೆ ಯಲ್ಲಿ, ಕೀರ್ ಸ್ಟಾರ್ಮರ್ 61ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡರು. ಒಂದು ದಶಕದ ಕಾಲ ಪ್ರಧಾನಿಯಾಗಿದ್ದು ನಿವೃತ್ತರಾದಾಗ ಟೋನಿ ಬ್ಲೇರ್ ಅವರಿಗಿಂತ ಇವರು ಆಗಲೇ ಏಳು ವರ್ಷ ದೊಡ್ಡವರಾಗಿದ್ದರು.
ನಾಯಕತ್ವದ ಮುಂದೆ ಉಳಿದೆಲ್ಲವು ಗೌಣ
ಸ್ಪಷ್ಟವಾಗಿ, ರಾಜಕೀಯ ಅರ್ಥವ್ಯವಸ್ಥೆಯು ಹೆಚ್ಚು ಸಂಕೀರ್ಣ ಮತ್ತು ಸವಾಲಿನದಾಗುತ್ತಿದ್ದಂತೆ, ಮತದಾರರು ಸರ್ಕಾರವನ್ನು ವಿಭಿನ್ನವಾಗಿ ನೋಡಲು ಆರಂಭಿಸಿದ್ದಾರೆ. ಅವರು ನಾಯಕರಲ್ಲಿ ಹುಡುಕುವ ಕೌಶಲ್ಯಗಳು ವಯೋನಿರಪೇಕ್ಷವಾಗಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯೌವನವು ಈಗ ಅಷ್ಟೊಂದು ತುರ್ತು ಆದ್ಯತೆಯಾಗಿ ಉಳಿದಿಲ್ಲ. ವಯಸ್ಸನ್ನು ಲೆಕ್ಕಿಸದೆ, ಒಂದು ವೈಚಾರಿಕ (ಅಥವಾ ಸೈದ್ಧಾಂತಿಕ) ನೆಲೆಗಟ್ಟನ್ನು ಹೊಂದಿರುವ ಚಾಣಾಕ್ಷ, ದೃಢ ಹೆಜ್ಜೆಯ ನಾಯಕತ್ವವೇ ಹೆಚ್ಚು ಮುಖ್ಯವಾಗುತ್ತದೆ.
ಭಾರತದಲ್ಲೇ ಇದೆ ಉದಾಹರಣೆ
ಭಾರತದಲ್ಲಿ, ಹಲವು ಪ್ರಧಾನ ಮಂತ್ರಿಗಳು ವಯಸ್ಸಿನ ಮಿತಿಯನ್ನು ದಾಟಿದ ನಂತರವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪಿ.ವಿ. ನರಸಿಂಹರಾವ್ ಅವರು 1991ರ ಆರ್ಥಿಕ ಸುಧಾರಣೆಗಳ ಮೂಲಕ ದೇಶವನ್ನು ಮುನ್ನಡೆಸಿದಾಗ ಅವರಿಗೆ ಎಪ್ಪತ್ತರ ಹರೆಯವಾಗಿತ್ತು. ಮೋದಿಯವರ ನೇರ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 81ನೇ ವಯಸ್ಸಿನವರೆಗೂ ಆಡಳಿತ ನಡೆಸಿದರು. ಇಂದಿಗೂ ಸಹ, ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅಥವಾ ಎನ್ ಸಿ ಪಿ ಯ ಶರದ್ ಪವಾರ್ ಅವರಂತಹ ನಾಯಕರು ತಮ್ಮ ಎಂಬತ್ತರ ದಶಕದಲ್ಲೂ ಕೇಂದ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಬಿಜೆಪಿಯ ಇತಿಹಾಸವೂ ಇದನ್ನೇ ಪ್ರತಿಬಿಂಬಿಸುತ್ತದೆ. 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು 79ನೇ ವಯಸ್ಸಿನಲ್ಲಿ ಮರು-ಚುನಾವಣೆಗಾಗಿ ಪ್ರಚಾರ ಮಾಡಿದರು ಮತ್ತು 84ನೇ ವಯಸ್ಸಿನವರೆಗೂ ಸಂಸತ್ತಿನಲ್ಲಿ ಸೇವೆ ಸಲ್ಲಿಸಿದರು. ಅಡ್ವಾಣಿಯವರು ತಮ್ಮ ಎಂಬತ್ತರ ದಶಕದಲ್ಲೂ ಸತತವಾಗಿ ಹಲವು ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸಿ, ಅಂತಿಮವಾಗಿ ತಮ್ಮ 91ನೇ ವಯಸ್ಸಿನಲ್ಲಿ ಸಂಸದೀಯ ಇನ್ನಿಂಗ್ಸ್ ಮುಗಿಸಿದರು. ಮುರಳಿ ಮನೋಹರ್ ಜೋಶಿಯವರು 85ನೇ ವಯಸ್ಸಿನಲ್ಲಿ ತಮ್ಮ ಅಧಿಕಾರಾವಧಿ ಮುಗಿಯುವವರೆಗೂ ಶಿಕ್ಷಣ ಮತ್ತು ಇಂಧನದಂತಹ ವಿಷಯಗಳ ಮೇಲಿನ ಚರ್ಚೆಗಳನ್ನು ರೂಪಿಸುತ್ತಾ, ಪ್ರಭಾವಿ ಸಂಸದೀಯ ಸಮಿತಿಗಳ ನೇತೃತ್ವ ವಹಿಸಿದ್ದರು.
2014ರಲ್ಲಿ ಕಂಡುಬಂದ ಮಹತ್ವದ ತಿರುವು ಕೂಡ ಬಿಜೆಪಿಯ ವಯೋಮಿತಿ ನಿಯಮದಿಂದಾಗಿರಲಿಲ್ಲ; ಬದಲಾಗಿ, ಮೋದಿಯವರು ಪಡೆದ ಬೃಹತ್ ಜನಾದೇಶಕ್ಕೆ ತಕ್ಕಂತೆ ಪಕ್ಷವನ್ನು ಪುನರ್ ಸಂಘಟಿಸುವ ಒಂದು ‘ತಲೆಮಾರುಗಳ ಪರಿವರ್ತನೆ’ಯಾಗಿತ್ತು. ಅದು ವಿವೇಚನೆಯಿಲ್ಲದೆ ಅನ್ವಯಿಸಬೇಕಾದ ಯಾವುದೇ ಯಾಂತ್ರಿಕ ಸೂತ್ರವಾಗಿರಲಿಲ್ಲ. ಹಾಗಾಗಿ, ಇಲ್ಲಿನ ತಿರುಳು ವಯಸ್ಸಲ್ಲ, ಬದಲಿಗೆ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ. ತಮ್ಮ ‘ಹೆಚ್ಚಿನ’ ವಯಸ್ಸು ಎಂದು ಹೇಳಲಾಗುತ್ತಿದ್ದರೂ, ಮೋದಿಯವರು ಮೂರು ತಿಂಗಳ 2024ರ ಚುನಾವಣಾ ಪ್ರಚಾರದ ಸಮಯದಲ್ಲಿ 200ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಹೆಚ್ಚಿನ ದಿನಗಳಲ್ಲಿ, ದಗದಗಿಸುವ ಬೇಸಿಗೆಯಲ್ಲಿ ಮೂರು-ನಾಲ್ಕು ಭಾಷಣಗಳನ್ನು ಮಾಡಿದ ನಂತರ, ಅವರು ಸರ್ಕಾರಿ ಸಭೆಗಳು, ನೀತಿ ಪರಿಶೀಲನೆಗಳು ಮತ್ತು ನಿರ್ಧಾರ ತೆಗೆದುಕೊಳ್ಳಲು ದೆಹಲಿಗೆ ವಾಪಸ್ ಹಾರುತ್ತಿದ್ದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರು ಆ ಕೆಲಸಕ್ಕೆ ಸಮರ್ಥರಾಗಿದ್ದರು – ಮತ್ತು ಈಗಲೂ ಇದ್ದಾರೆ.
ಹೀಗಿದ್ದಾಗ್ಯೂ, ರಾಜಕೀಯದಲ್ಲಿನ ದೀರ್ಘಕಾಲೀನ ಪ್ರಸ್ತುತತೆ ಎನ್ನುವುದು ಕೇವಲ ದೈಹಿಕ ಸಾಮರ್ಥ್ಯವನ್ನು ಮೀರಿದ್ದಾಗಿದೆ. ತಮ್ಮ ತಲೆಮಾರಿನ ಅತ್ಯಂತ ಪ್ರತಿಭಾವಂತ ಮತ್ತು ಬೌದ್ಧಿಕವಾಗಿ ಚುರುಕಾದ ರಾಜಕಾರಣಿಯಾಗಿರುವ ಮೋದಿಯವರ ಜನಪ್ರಿಯತೆಯ ಗುಟ್ಟು, ಅವರು ಮೆಚ್ಚುವಂತಹ ನಿರಂತರ ವಿಕಸನವನ್ನು ಹೊಂದಿರುವುದೇ ಆಗಿದೆ. ಉದ್ದೇಶ ಯಾವುದೇ ಇರಲಿ, ಅದಕ್ಕೆ ತಕ್ಕಂತೆ ತಮ್ಮನ್ನು ತಾವು ಮರು-ರೂಪಿಸಿಕೊಳ್ಳುವ ಮೂಲಕ ಅವರು ಸದಾ ಸಿದ್ಧರಾಗಿರುತ್ತಾರೆ. ಅವರ ನೀತಿ-ನಿರೂಪಣೆಗಳು, ನಾಗರಿಕರ ಆಕಾಂಕ್ಷೆಗಳು ಮತ್ತು ತುಡಿತಗಳೊಂದಿಗೆ ನಿರಂತರವಾಗಿ ಹೆಜ್ಜೆ ಹಾಕುವ ರೀತಿ, ಅವರ ವಿದೇಶಾಂಗ ವ್ಯವಹಾರಗಳ ಕಾರ್ಯತಂತ್ರ, ಅವರ ಆರ್ಥಿಕ ಚಿಂತನೆಗಳು: ಈ ಎಲ್ಲದರಲ್ಲೂ ಅವರು ಇಂದಿಗೂ ಭಾರತದ ರಾಜಕೀಯದಲ್ಲಿ ಅತ್ಯಂತ ಸಮಕಾಲೀನ ಚಿಂತನೆಯುಳ್ಳವರಾಗಿದ್ದಾರೆ.
ಬೇರೆ ಬೇರೆ ವಿಷಯಗಳಲ್ಲಿ ಇತರರಿಗೆ ಹೆಚ್ಚು ಜ್ಞಾನವಿರಬಹುದು, ಆದರೆ ಸಮಗ್ರವಾಗಿ ನೋಡಿದಾಗ, ಸದ್ಯಕ್ಕೆ ಅವರಿಗೆ ಸರಿಸಾಟಿಯಾಗಿ ಬೇರೆ ಯಾರೂ ಕಾಣಿಸುತ್ತಿಲ್ಲ – ಅವರಿಗಿಂತ ಹಲವು ವರ್ಷಗಳ ನಂತರ ಜನಿಸಿದವರೂ ಕೂಡ ಇಲ್ಲ. ಫಿನ್ಟೆಕ್ನಿಂದ ಸೆಮಿಕಂಡಕ್ಟರ್ಗಳವರೆಗೆ, ಉದಯೋನ್ಮುಖ ತಂತ್ರಜ್ಞಾನದಿಂದ ವ್ಯಾಪಾರ ಒಪ್ಪಂದಗಳಲ್ಲಿನ ಮಹತ್ವಾಕಾಂಕ್ಷೆಯವರೆಗೆ, ಅವರು ಸಭೆಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿಯಲ್ಲದಿರಬಹುದು, ಆದರೆ ಖಂಡಿತವಾಗಿಯೂ ತಮ್ಮ ಚಿಂತನೆಯಲ್ಲಿ ಅತ್ಯಂತ ಆಧುನಿಕರಾಗಿದ್ದಾರೆ. ಇದೇ ಕಾರಣಕ್ಕಾಗಿ ಭಾರತೀಯರು ಅವರಲ್ಲಿ ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಒಂದು ರಾಜಕೀಯ ಜೀವನವನ್ನು – ಮತ್ತು ಮೋದಿಯವರ ನಿರಂತರ ಜನಪ್ರಿಯತೆಯನ್ನು – ಕೇವಲ ದೈಹಿಕ ವಯಸ್ಸಿನ ಆಧಾರದ ಮೇಲೆ ಅಳೆಯುವುದು ಕೇವಲ ಅನ್ಯಾಯ ಮಾತ್ರವಲ್ಲ, ಅವಾಸ್ತವಿಕವೂ ಹೌದು. ಮತದಾರರ ಆಯ್ಕೆಗಳು ವಯಸ್ಸನ್ನು ಆಧರಿಸಿದಲ್ಲ.

ಲೇಖಕರು : ಅಶೋಕ್ ಮಲಿಕ್
(ಅಶೋಕ್ ಮಲಿಕ್, ‘ದಿ ಏಷ್ಯಾ ಗ್ರೂಪ್’ನ ಪಾಲುದಾರರು ಮತ್ತು ಅದರ ಭಾರತ ವಿಭಾಗದ ಅಧ್ಯಕ್ಷರು. ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಅವರ ವೈಯಕ್ತಿಕ.)