ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಅಮೆರಿಕದ ವೆನೆಜುವೆಲಾದ ವಾಯುವ್ಯ ಭಾಗದಲ್ಲಿ ಬುಧವಾರ ಸಂಜೆ 6.2 ತೀವ್ರತೆಯ ಭೂಕಂಪ ದಾಖಾಲಾಗಿದೆ. ಈ ಭೂಕಂಪದಿಂದ ಕಟ್ಟಡಗಳುಕಂಪಿಸಿದ್ದು, ಭಯಗೊಂಡ ಜನರು ಮನೆಗಳು ಮತ್ತು ಕಚೇರಿಗಳಿಂದ ಹೊರಗೋಡಿ ಬಂದಿದ್ದಾರೆ. ರಸ್ತೆಗಳು ಬಿರುಕು ಬಿಟ್ಟಿದ್ದು, ಹಲವು ವಾಹನಗಳಿಗೂ ಸಣ್ಣ ಮಟ್ಟಿನ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಜುಲಿಯಾ ರಾಜ್ಯದ ಮೆನೆ ಗ್ರಾಂಡೆಯಿಂದ 24 ಕಿಲೋಮೀಟರ್ ಈಶಾನ್ಯಕ್ಕೆ, 7.8 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಈ ಕಂಪನವು ಕ್ಯಾರಕಾಸ್ ಮತ್ತು ಮರಕೈಬೊ ಸೇರಿದಂತೆ ಅನೇಕ ನಗರಗಳಲ್ಲಿ ಅನುಭವವಾಗಿದ್ದು, ನೆರೆಯ ಕೊಲಂಬಿಯಾದ ಗಡಿಯವರೆಗೂ ಪರಿಣಾಮ ಬೀರಿದೆ.
ಕಂಪನದ ತೀವ್ರತೆಯಿಂದಾಗಿ ಅರುಬಾ, ಕುರಾಕಾವೊ ಮತ್ತು ಬೊನೈರ್ ಪ್ರದೇಶಗಳಲ್ಲಿಯೂ ಜನರು ಭಯಗೊಂಡಿದ್ದಾರೆ. ಆದಾಗ್ಯೂ, ಪ್ರಾಥಮಿಕ ಮಾಹಿತಿಯ ಪ್ರಕಾರ, ದೊಡ್ಡ ಮಟ್ಟದ ಜೀವಹಾನಿ ಅಥವಾ ಆಸ್ತಿ ನಷ್ಟ ವರದಿಯಾಗಿಲ್ಲ. ಇದೇ ಸಂದರ್ಭದಲ್ಲಿ ಜುಲಿಯಾ ಮತ್ತು ಬರಿನಾಸ್ ರಾಜ್ಯಗಳಲ್ಲಿ ಸಣ್ಣ ಮಟ್ಟದ ಕಂಪನಗಳೂ ದಾಖಲಾಗಿವೆ.
ದೇಶದಲ್ಲಿ ಬಲವಾದ ಭೂಕಂಪಗಳು ಅಪರೂಪವಾಗಿದ್ದರೂ, ಜನಸಂಖ್ಯೆಯ 80 ಪ್ರತಿಶತಕ್ಕೂ ಹೆಚ್ಚು ಮಂದಿ ಭೂಕಂಪನ ವಲಯಗಳಲ್ಲಿ ವಾಸಿಸುತ್ತಿದ್ದಾರೆ. 1997ರಲ್ಲಿ ಸುಕ್ರೆ ರಾಜ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ 73 ಮಂದಿ ಸಾವನ್ನಪ್ಪಿದ್ದರು, 1976ರಲ್ಲಿ ಕ್ಯಾರಕಾಸ್‌ನಲ್ಲಿ ನಡೆದ ಭೂಕಂಪದಲ್ಲಿ 300 ಮಂದಿ ಪ್ರಾಣ ಕಳೆದುಕೊಂಡಿದ್ದರು.