ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬ, ವಾರಾಂತ್ಯ ಹಾಗೂ ಸಾಲು ರಜೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರದೇಶದ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು ಮತ್ತು ಸೋಲಾಪೂರದ ತುಳಜಾಪುರಕ್ಕೆ ಹೋಗಿ ಬರಲು ಪ್ರಯಾಣಿಕರ ಅನುಕೂಲಕ್ಕಾಗಿ 500 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ ಸುಶೀಲಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸೆಪ್ಟೆಂಬರ್ 29ರ ವರೆಗೆ ಸಂಸ್ಥೆ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು, ತುಳಜಾಪೂರ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಿಗೆ ಹಾಗೂ ಸೆಪ್ಟೆಂಬರ್ 26 ರಿಂದ ಸೆ.27 ಹಾಗೂ ಸೆ.30 ರಂದು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿ ವಾಹನಗಳನ್ನ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ನಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶವಿದ್ದು, ಪ್ರಯಾಣಿಕರು ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿರುವ 18 ಗಣಕೀಕೃತ ಬುಕ್ಕಿಂಗ್ ಕೌಂಟರ್‌ಗಳ ಮುಖಾಂತರ ಆಸನ ಬುಕಿಂಗ್ ಮಾಡಬಹುದಾಗಿದೆ. 4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ.5ರಷ್ಟು ಅಥವಾ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.