ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಉತ್ಪಾದನೆ ಕಂಡ ಸೂಪರ್‌ಸಾನಿಕ್ ಯುದ್ಧ ವಿಮಾನ ಮಿಗ್-21 ತನ್ನ 6 ದಶಕಗಳ ಸೇವೆಗೆ ಇಂದು ವಿದಾಯ ಹೇಳಿದೆ. ಚಂಡೀಗಢದ ವಾಯುನೆಲೆಯಲ್ಲಿಂದು ತನ್ನ ಕೊನೆಯ ಹಾರಾಟ ನಡೆಸಿದ ರಷ್ಯಾ ಮೂಲದ ಪ್ರಸಿದ್ಧ ಮಿಗ್-21 ಯುದ್ಧ ವಿಮಾನಕ್ಕೆ ಭಾರತೀಯ ವಾಯುಪಡೆ ಗುಡ್‌ಬೈ ಹೇಳಿದೆ.
ನೋಡಲು ಸಣ್ಣದಾದರೂ ಅತ್ಯಂತ ವೇಗವಾದ, ಬಹುಮುಖಿ ಯುದ್ಧ ವಿಮಾನ ಇದಾಗಿತ್ತು. ಶತ್ರುಗಳ ವಿಮಾನಗಳನ್ನು ತಡೆಯಲು, ಭೂಮಿಯಲ್ಲಿನ ಗುರಿಗಳ ಮೇಲೆ ದಾಳಿ ನಡೆಸಲು ಮತ್ತು ಗುಪ್ತಚರ ಮಾಹಿತಿಗಳನ್ನು ಕಲೆಹಾಕಲು ಸೂಕ್ತವಾದ ಯುದ್ಧ ವಿಮಾನವಾಗಿತ್ತು ಅನ್ನೋದು ತಜ್ಞರ ವಿಶ್ಲೇಷಣೆ.
ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಭಾರತೀಯ ವಾಯುಪಡೆ ವಿದಾಯ ಸಲ್ಲಿಸಿತು. ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ವರಿಷ್ಠ ಜನರಲ್ ಉಪೇಂದ್ರ ದ್ವಿವೇದಿ, ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ಹಾಗೂ ನೌಕಾ ಪಡೆಯ ವರಿಷ್ಠ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಈ ವಿದಾಯ ಸಮಾರಂಭಕ್ಕೆ ಸಾಕ್ಷಿಯಾದರು.