Friday, September 26, 2025

ಏಷ್ಯಾ ಕಪ್​​​ ಫೈನಲ್​​ಗೂ ಮುನ್ನ: ಪಾಕ್ ಆಟಗಾರರಿಗೆ ಶಾಕ್ ಕೊಟ್ಟ ಐಸಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್‌ ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ ಭುಗಿಲೆದ್ದ ವಿವಾದವು ಕೋಲಾಹಲಕ್ಕೆ ಕಾರಣವಾಗಿತ್ತು.

ಈ ವಿಚಾರವಾಗಿ ಎರಡೂ ಕ್ರಿಕೆಟ್ ಮಂಡಳಿಗಳು ಪರಸ್ಪರರ ಆಟಗಾರರ ವಿರುದ್ಧ ಐಸಿಸಿಗೆ ದೂರು ಸಲ್ಲಿಸಿದ್ದವು. ಪಾಕ್ ಕ್ರಿಕೆಟ್ ಮಂಡಳಿಯ ದೂರಿನನ್ವಯ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಐಸಿಸಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಆ ಬಳಿಕ ಸೂರ್ಯಕುಮಾರ್​ಗೆ ಶೇ. 30 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ.

ಇತ್ತ ಬಿಸಿಸಿಐ ಕೂಡ ಪಾಕ್ ಆಟಗಾರರಾದ ಸಾಹಿಬ್ಜಾದಾ ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ವಿರುದ್ಧ ಐಸಿಸಿಗೆ ದೂರು ನೀಡಿತ್ತು. ಅದರಂತೆ ಇವರಿಬ್ಬರ ತನಿಖೆ ಮಾಡಿರುವ ಐಸಿಸಿ, ಮಹತ್ವದ ತೀರ್ಪು ಪ್ರಕಟಿಸಿದೆ.

ಭಾರತ ವಿರುದ್ಧದ ಸೂಪರ್ 4 ಪಂದ್ಯದ ವೇಳೆ ಸಾಹಿಬ್‌ಜಾದಾ ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು. ಫರ್ಹಾನ್ ಅರ್ಧಶತಕ ಬಾರಿಸಿದ ಬಳಿಕ ಗನ್ ಸೆಲೆಬ್ರೇಷನ್ ಮಾಡಿದರೆ, ಹ್ಯಾರಿಸ್ ರೌಫ್ ಫೈಟರ್ ಜೆಟ್ ಅನ್ನು ಹೊಡೆದುರುಳಿಸುವಂತೆ ಸನ್ನೆ ಮಾಡಿದ್ದರು. ಇವರಿಬ್ಬರ ನಡೆಯ ವಿರುದ್ಧ ಬಿಸಿಸಿಐ, ಐಸಿಸಿಗೆ ದೂರು ನೀಡಿತ್ತು.

ಆ ಪ್ರಕಾರ ವಿಚಾರಣೆ ನಡೆಸಿರುವ ಐಸಿಸಿ, ಇವರಿಬ್ಬರ ಆಕ್ರಮಣಕಾರಿ ಸನ್ನೆಗಳು ಮತ್ತು ಅನುಚಿತ ವರ್ತನೆಗಾಗಿ ಹ್ಯಾರಿಸ್ ರೌಫ್‌ಗೆ ಪಂದ್ಯ ಶುಲ್ಕದ 30 ಪ್ರತಿಶತ ದಂಡ ವಿಧಿಸಿದೆ. ಇತ್ತ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ಅವರ ಗನ್ ಸೆಲೆಬ್ರೇಷನ್​ಗೆ ಕೇವಲ ಎಚ್ಚರಿಕೆ ನೀಡಿ ಕಳುಹಿಸಿದೆ.

ಇದನ್ನೂ ಓದಿ