ಹೊಸದಿಗಂತ ಕಲಬುರಗಿ
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು,ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕರ್ಚಖೇಡ್ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ.
ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ,ಕರ್ಚಖೇಡ್ ಗ್ರಾಮದ ಹಳ್ಳ ನೀರಿನಿಂದ ತುಂಬಿ ಹರಿಯುತ್ತಿದ್ದು, ಇದೀಗ ಹಳ್ಳದ ನೀರು ಗ್ರಾಮಕ್ಕೆ ಹೊಕ್ಕಿದ ಪರಿಣಾಮ ಇಡಂ ಗ್ರಾಮವೇ ಜಲಾವೃತ ಪ್ರದೇಶವಾಗಿದೆ.
ಕರ್ಚಖೇಡ್ ಗ್ರಾಮದ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದ ಪರಿಣಾಮವಾಗಿ ಗ್ರಾಮದ ಹಲವು ಮನೆಗಳಿಗೆ ಹಾಗೂ ದೇವಸ್ಥಾನಗಳಿಗೆ ಜಲಾವೃತಗೊಂಡಿದ್ದು, ರಾತ್ರಿಯಿಡೀ ಗ್ರಾಮಸ್ಥರು ಪರದಾಟ ನಡೆಸಿದ್ದಾರೆ.ನಿರಂತರ ಮಳೆಯಿಂದಾಗಿ ಇಡೀ ಕರ್ಚಖೇಡ್ ಗ್ರಾಮವನ್ನೇ ಹಳ್ಳದ ನೀರು ಆವರಿಸಿಕೊಂಡಿದೆ.
ದತ್ತನ ದರ್ಬಾರ್ ಸನ್ನಿಧಿ ಜಲಾವೃತ
ನೆರೆಯ ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ಜಿಲ್ಲೆಯ ಭೀಮಾ ನದಿಗೆ ನೀರು ಹರಿಬಿಟ್ಟಿದ್ದರಿಂದ ಪ್ರವಾಹ ಉಂಟಾಗಿದ್ದು, ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ ಗಾಣಗಾಪುರಿನ ದತ್ತನ ದರ್ಬಾರ್ ಸನ್ನಿಧಿ ಜಲಾವೃತವಾಗಿವೆ. ನಿನ್ನೆಯಷ್ಟೇ ಭಾರಿ ಮಳೆಯಿಂದಾಗಿ ಪವಿತ್ರ ಸಂಗಮದ ಪಾರಾಯಣ ಮಂಟಪ ಜಲಾವೃತಗೊಂಡಿದ್ದು, ಇದೀಗ ದತ್ತನ ದರ್ಬಾರ್ ಸನ್ನಿಧಿಗೂ ಭೀಮಾ ನದಿಯ ಪ್ರವಾಹ ಸುತ್ತುವರಿದಿದೆ.