Sunday, September 28, 2025

ಕರೂರ್ ಕಾಲ್ತುಳಿತ ಪ್ರಕರಣ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ನಟ ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ನಡೆದ ಕರೂರ್ ಕಾಲ್ತುಳಿತ ದುರಂತವು ರಾಜ್ಯವನ್ನೇ ತಲ್ಲಣಗೊಳಿಸಿದ್ದು, ಇದೀಗ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತ್ವರಿತ ತನಿಖೆ ನಡೆಯಬೇಕೆಂದು ಮನವಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ತುರ್ತು ಅರ್ಜಿಯನ್ನು ಪರಿಗಣಿಸಲು ಒಪ್ಪಿಕೊಂಡಿದ್ದು, ಘಟನೆಯನ್ನು ಸ್ವಯಂಪ್ರೇರಿತವಾಗಿ ತನಿಖೆಗೆ ಒಳಪಡಿಸಿದೆ.

ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ವಿಜಯ್ ಅವರ ಸಾರ್ವಜನಿಕ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 38ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಘಟನೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ ವಿಜಯ್, ಮೃತರ ಕುಟುಂಬಗಳಿಗೆ 20 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ 2 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದರು. “ನಿಮ್ಮ ನಷ್ಟವನ್ನು ಯಾರೂ ತುಂಬಲಾರರು, ಆದರೆ ಈ ಸಂಕಷ್ಟದಲ್ಲಿ ನಿಮ್ಮೊಂದಿಗೆ ನಿಂತು ಸಹಾನುಭೂತಿ ಹಂಚಿಕೊಳ್ಳುವುದು ನನ್ನ ಕರ್ತವ್ಯ” ಎಂದು ಅವರು ಹೇಳಿದ್ದಾರೆ.

ಆದರೆ, ಸರ್ಕಾರಿ ಮೂಲಗಳ ಪ್ರಕಾರ, ಟಿವಿಕೆ ಸಂಘಟನಾ ದೋಷಗಳೇ ದುರಂತಕ್ಕೆ ಕಾರಣವೆಂದು ಆರೋಪಿಸಲಾಗಿದೆ. ವಿಜಯ್ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದದ್ದು, ವಾಹನದ ದೀಪಗಳನ್ನು ಆಫ್ ಮಾಡುವ ನಿರ್ಧಾರ, ಭಾರೀ ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ಸೌಲಭ್ಯಗಳ ಕೊರತೆ ಹಾಗೂ ಅನುಮತಿಸಲಾದ ಮಿತಿಯನ್ನು ಮೀರಿದ ಜನಸಮೂಹ ಈ ಎಲ್ಲವು ಅವಘಡಕ್ಕೆ ಕಾರಣವೆಂದು ತಿಳಿಸಲಾಗಿದೆ. 10,000 ಮಂದಿಗೆ ಅನುಮತಿ ನೀಡಿದ್ದರೂ 25,000 ಕ್ಕೂ ಹೆಚ್ಚು ಜನರು ಜಮಾಯಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.