ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆ ಸಂಬಂಧ ಎಡಿಜಿಪಿ ಡೇವಿಡ್ಸನ್ ದೇವಾಶಿರ್ವತಮ್ ಇಂದು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದಾರೆ.
ವಿಜಯ್ ಬೆಂಬಲಿಗರು ಆರೋಪಿಸಿರುವಂತೆ ರ‍್ಯಾಲಿ ವೇಳೆ ಎಲ್ಲೂ ಕಲ್ಲು ತೂರಾಟ ಸಂಭವಿಸಿಲ್ಲ. ರ‍್ಯಾಲಿ ಸ್ಥಳದಲ್ಲಿ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತೀ 20 ಜನರಿಗೆ ಒಬ್ಬರಂತೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಎಡಿಜಿಪಿ ಅವರು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಭದ್ರತೆ ಸರಿಯಾಗಿ ಇರಲಿಲ್ಲ. ಆಂಬುಲೆನ್ಸ್ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂಬಿತ್ಯಾದಿ ಆರೋಪಗಳು ಕೇಳಿ ಬಂದಿವೆ.
ಪೊಲೀಸರನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು ರ್ಯಾಲಿ ಸಮಯದಲ್ಲಿ ವಿದ್ಯುತ್ ಸಂಪರ್ಕ ಸುಗಮವಾಗಿತ್ತು. ಹೊರಗಿನಿಂದ ಯಾರೂ ಕೂಡ ಬಂದು ದಾಂದಲೆ ಮಾಡಿಲ್ಲ ಎಂದು ಹೇಳಿದ ಎಡಿಜಿಪಿ ಡೇವಿಡ್ಸನ್ ದೇವಶಿರ್ವತಂ, ರ‍್ಯಾಲಿ ಸ್ಥಳವನ್ನು ಬೇರೆಡೆ ಇಡುವಂತೆ ತಾವು ಸಲಹೆ ನೀಡಿದ್ದಾಗಿಯೂ ಸ್ಪಷ್ಟಪಡಿಸಿದ್ದಾರೆ.
ಘಟನೆಯ ತನಿಖೆಗಾಗಿ ಸಮಿತಿ ರಚಿಸಲಾಗಿದ್ದು, ಮೊದಲ ಹಂತದ ತನಿಖೆ ನಂತರ ಹೆಚ್ಚಿನ ವಿವರಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.