Monday, September 29, 2025

ಕ್ರಿಕೆಟಿಗರಿಗೆ ಸಂಕಷ್ಟ ತಂದಿಟ್ಟ ಆನ್‌ಲೈನ್ ಬೆಟ್ಟಿಂಗ್ ಕೇಸ್: ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಸಜ್ಜು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ 1xBet ಪ್ರಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಶಿಖರ್ ಧವನ್, ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಮುಂದಾಗಿದೆ ಎಂದು ವರದಿಯಾಗಿದೆ.

ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್​ಗಳ ಪ್ರಚಾರದಿಂದ ಬಂದ ಆದಾಯದಿಂದ ಯಾವ್ಯಾವ ಆಸ್ತಿಗಳನ್ನು ಖರೀದಿಸಿದ್ದಾರೋ ಆ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಮುಂದಾಗಿದೆ.

ಭಾರತದ ಸ್ಟಾರ್ ಕ್ರಿಕೆಟಿಗರು ಹಾಗೂ ಬಾಲಿವುಡ್ ಸೆಲೆಬ್ರೆಟಿಗಳನ್ನು ಈಗಾಗಲೇ ತನಿಖೆಗೆ ಒಳಪಡಿಸಲಾಗಿದೆ. ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ಬೆಟ್ಟಿಂಗ್ ಅಪ್ಲಿಕೇಶನ್ ಸಂಸ್ಥೆಯಿಂದ ಭಾರಿ ಮೊತ್ತದ ಹಣವನ್ನು ಶುಲ್ಕದ ರೂಪದಲ್ಲಿ ಪಾವತಿಸಲಾಗಿತ್ತು. ಇದೀಗ ಈ ಅನುಮೋದನೆ ಶುಲ್ಕದಿಂದ ಖರೀದಿಸಿದ ಸ್ವತ್ತುಗಳು ಅಪರಾಧದ ಆದಾಯ’ಎಂಬ ನಿರ್ಧಾರಕ್ಕೆ ಇಡಿ ಬಂದಿದೆ.

ಇಡಿ ತನಿಖೆಯ ಪ್ರಕಾರ, ಟೀಂ ಇಂಡಿಯಾದ ಕೆಲವು ಆಟಗಾರರು ಮತ್ತು ಸೆಲೆಬ್ರೆಟಿಗಳು ಈ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆಸ್ತಿಗಳನ್ನು ಖರೀದಿಸಲಾಗಿದೆ ಎಂಬುದು ಇಡಿ ತನಿಖೆಯಿಂದ ಬಹಿರಂಗವಾಗಿದೆ. ಹೀಗಾಗಿ ಈ ಎಲ್ಲಾ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಳ್ಳಲಿದೆ.

ಇತ್ತೀಚೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಯಲ್ಲಿ ನಾಲ್ವರು ಕ್ರಿಕೆಟಿಗರನ್ನು ಒಬ್ಬೊಬ್ಬರಾಗಿ ಹಲವಾರು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಕ್ರಿಕೆಟಿಗರು ಮಾತ್ರವಲ್ಲದೆ, ಚಲನಚಿತ್ರ ತಾರೆಯರಾದ ಸೋನು ಸೂದ್, ಮಿಮಿ ಚಕ್ರವರ್ತಿ ಮತ್ತು ಅಂಕುಶ್ ಹಜ್ರಾ ಅವರನ್ನು ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸಿತ್ತು.