ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಏನೇ ವಸ್ತು ಬೇಕಿದ್ದರೂ ಮನೆಯಲ್ಲಿ ಕುಳಿತು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುತ್ತಾರೆ. ಅದು ಸಣ್ಣ ಸೂಜಿ ದಾರದಿಂದ ಹಿಡಿದು ಪ್ರಿಡ್ಜ್ ವಾಶಿಂಗ್ ಮೆಷಿನ್‌ವರೆಗೆ ಪ್ರತಿಯೊಂದನ್ನು ಇಂದು ಆನ್‌ಲೈನ್ ಮೂಲಕ ತರಿಸಿಕೊಳ್ಳುವುದು ಮಾಮೂಲಿ ಆಗಿದೆ.
ಅದೇ ರೀತಿ ಇಲ್ಲಿಯೋಬ್ಬ ವ್ಯಕ್ತಿ ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದ್ದು, ಆತನಿಗೆ ಬೆಳ್ಳಿ ನಾಣ್ಯಗಳ ಬದಲು ಮ್ಯಾಗಿ ಹಾಗೂ ಹಳದಿರಾಮ್ಸ್ ಬ್ರಾಂಡ್‌ನ ಕೆಲ ಮಿಕ್ಸ್ಚರ್ ಪ್ಯಾಕೇಟ್ ತಲುಪಿದ್ದು, ಇದನ್ನು ನೋಡಿ ಅವರು ಗಾಬರಿಯಾಗಿದ್ದಾರೆ.
ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಇವರ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.
ವಿನೀತ್ ಕೆ ಎಂಬುವವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಬೆಳ್ಳಿ ನಾಣ್ಯಗಳ ಆರ್ಡರ್ ಮಾಡಿದರು. ಆದರೆ ಅವರ ಮನೆ ಬಾಗಿಲಿಗೆ ಬಂದದ್ದು ಮ್ಯಾಗಿ ನೂಡಲ್ಸ್ ಮತ್ತು ಹಲ್ದಿರಾಮ್ ತಿಂಡಿಗಳಿಂದ ತುಂಬಿದ ಚೀಲ. ಈ ವಿಚಾರವನ್ನು ಎಕ್ಸ್‌ನಲ್ಲಿ ಬರೆದುಕೊಂಡ ಅವರು, ಇದು ಸ್ವಿಗ್ಗಿ ಹಾರರ್ ಸ್ಟೋರಿ ಎಂದು ಬಣ್ಣಿಸಿದ್ದಾರೆ.
ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದೆ, ಆದರೆ ಮ್ಯಾಗಿ ಮತ್ತು ಹಲ್ದಿರಾಮ್ ಪ್ಯಾಕೆಟ್‌ಗಳು ಸಿಕ್ತು. ಇಡೀ ಆರ್ಡರ್‌ನಲ್ಲಿ ಒಂದು ಪೌಚ್ ಮಾತ್ರ ಬೆಳ್ಳಿ ಕಾಯಿನ್ ಇತ್ತು. ಅದನ್ನು ಸೀಲ್ ಮಾಡಲಾಗಿತ್ತು. ಡೆಲಿವರಿ ನೀಡಿದ ಯುವಕ ನಾವು ಅದನ್ನು ತೆರೆಯಲು ಸಾಧ್ಯವಿಲ್ಲ ನೀವು ಸಂಪೂರ್ಣ ಆರ್ಡರ್ ತೆಗೆದುಕೊಳ್ಳಿ ಅಥವಾ ಅದನ್ನು ರದ್ದುಗೊಳಿಸಿ ಎಂದು ಹೇಳಿದರು. ಇದರಿಂದಾಗಿ ಸ್ವಿಗ್ಗಿ ಕಸ್ಟಮರ್ ಕೇರ್ ಜೊತೆಗೆ 40 ನಿಮಿಷವನ್ನು ಮಾತುಕತೆ ನಡೆಯಿತು. ಬಳಿಕ ಆ ಆರ್ಡರನ್ನು ಸ್ವೀಕರಿಸಿದೆ ಆದರೆ ಕೇವಲ ಬ್ಯಾಗಷ್ಟನ್ನೇ ನಾನು ತೆಗೆದುಕೊಂಡೆ ಉಳಿದಿದ್ದನ್ನು ಡೆಲಿವರಿ ಬಾಯ್‌ಗೆ ನೀಡಿದ್ದು, ಹಿಂದಿರುಗಿಸಲು ಸಾಧ್ಯವಾಗದಿದ್ದರೆ ನೀವೇ ಸೇವಿಸಿ ನಾನು ಅದನ್ನು ಅರ್ಡರ್ ಮಾಡಿಲ್ಲ, ನನಗೆ ಅದು ಬೇಡ ಎಂದು ಹೇಳಿದೆ. ನಂತರ ಸ್ವೀಕರಿಸಿದ ಬೆಳ್ಳಿ ನಾಣ್ಯವೂ ಸರಿಯಾಗಿರಲಿಲ್ಲ, 999 ಕ್ವಾಲಿಟಿಯ ಬೆಳ್ಳಿ ನಾಣ್ಯದ ಬದಲಿಗೆ 925 ಮೌಲ್ಯದ ಬೆಳ್ಳಿ ನಾಣ್ಯ ಸ್ವೀಕರಿಸಬೇಕಾಯ್ತು. ಕಡಿಮೆ ಶುದ್ಧತೆಯ ನಾಣ್ಯದ ಜೊತೆಗೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲು ಹೋಗಿ ಹಲವು ರೀತಿಯ ಸಂಕಷ್ಟ ಎದುರಿಸಬೇಕಾಯ್ತು ಎಂದು ಅವರು ಬರೆದುಕೊಂಡಿದ್ದಾರೆ.
ಬಹುತೇಕರು ಚಿನ್ನ ಬೆಳ್ಳಿಯಂತಹ ಅಮೂಲ್ಯ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೊಂದು ದುಬಾರಿ ಮೌಲ್ಯದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವಷ್ಟು ಸೋಮಾರಿಗಳೇ ನೀವು? ಏಕೆ ದುಬಾರಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಿದ್ದೀರಿ ನೀವು ಸೋಮಾರಿಗಳೇ ಅಥವಾ ಮೂರ್ಖರೇ ಎಂದು ಕೆಲವರು ಅವರಿಗೆ ಕಾಮೆಂಟ್ ಮಾಡಿ ಪ್ರಶ್ನಿಸಿದ್ದಾರೆ.
ಇದಾದ ನಂತರ ಸ್ವಿಗ್ಗಿಯೂ ಇವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ವಿನೀತ್, ನಾವು ನಿಮಗಾಗಿ ಬಯಸಿದ್ದು ಇದಲ್ಲ. ದಯವಿಟ್ಟು ಆರ್ಡರ್ ಐಡಿಯನ್ನು ಹಂಚಿಕೊಳ್ಳಿ ಇದರಿಂದ ನಾವು ಇದನ್ನು ಮತ್ತಷ್ಟು ಪರಿಹರಿಸಬಹುದು ಎಂದು ಸ್ವಿಗ್ಗಿ ಪ್ರತಿಕ್ರಿಯಿಸಿತು. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಮತ್ತು ವಿವರಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು, ನಾವು ತ್ವರಿತ ಪರಿಶೀಲನೆಯನ್ನು ನಡೆಸಲು ಬಯಸುತ್ತೇವೆ. ದಯವಿಟ್ಟು ನಮ್ಮನ್ನು ಸಹಿಸಿಕೊಳ್ಳಿ ಎಂದು ಸ್ವಿಗ್ಗಿ ಹೇಳಿದೆ.