ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರಿನಲ್ಲಿ ನಿನ್ನೆ ಸಂಭವಿಸಿದ ಕಾಲ್ತುಳಿತ ಘಟನೆಗೆ ಪೊಲೀಸರೇ ಕಾರಣ ಎಂದು ಬಿಜೆಪಿ ನಾಯಕ ಕೆ ಅಣ್ಣಾಮಲೈ ಆರೋಪಿಸಿದ್ದಾರೆ.
ಭಾನುವಾರ ಕರೂರಿಗೆ ಆಗಮಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ಮೃತರ ಕುಟುಂಬಗಳಿಗೆ ತಲಾ ರೂ. 1 ಲಕ್ಷ ಪರಿಹಾರ ಘೋಷಿಸಿದರು. ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದರು.
ಕಾಲ್ತುಳಿತ ದುರಂತಕ್ಕೆ ವಿಜಯ್ ಅವರದ್ದು ತಪ್ಪೇನಿಲ್ಲಾ, ಹೆಚ್ಚಿನ ಜನ ಸೇರುವುದನ್ನು ನಿರೀಕ್ಷಿಸಿ ರಾಜ್ಯ ಪೊಲೀಸರು ಮತ್ತು ಗುಪ್ತಚರ ಇಲಾಖೆ ಸಮರ್ಪಕವಾಗಿ ಪೋಲೀಸರನ್ನು ನಿಯೋಜಿಸಬೇಕಾಗಿತ್ತು. ಪೊಲೀಸರು ಯಾಕೆ 7 ಗಂಟೆ ಅನುಮತಿ ನೀಡಬೇಕಾಯಿತು? ಎರಡು ಗಂಟೆ ನೀಡಿದ್ದರೆ ಸಾಕಾಗಿತ್ತು ಎಂದು ಟೀಕಾ ಪ್ರಹಾರ ನಡೆಸಿದರು.
ತಮಿಳುನಾಡು ಪೊಲೀಸ್ ಹಲವು ಎಚ್ಚರಿಕೆಗಳ ನಡುವೆಯೂ ಗುಂಪನ್ನು ನಿಯಂತ್ರಿಸಲು ವಿಫಲವಾಗಿದೆ. 500 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಡಿಜಿಪಿ ಹೇಳುತ್ತಾರೆ. ಆದರೆ, ವಾಸ್ತವವಾಗಿ ಬೀದಿಯಲ್ಲಿ ಇದ್ದ ಪೊಲೀಸರ ಸಂಖ್ಯೆ 100ಕ್ಕಿಂತಲೂ ಕಡಿಮೆ. ಆಂಬುಲೆನ್ಸ್ಗಳೂ ಹೋಗದಷ್ಟು ಕಿರಿದಾದ ಬೀದಿಯಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡುವ ಮುನ್ನ ಪೊಲೀಸರು ನೂರು ಬಾರಿ ಯೋಚಿಸಬೇಕಿತ್ತು ಎಂದು ತಮಿಳುನಾಡು ಬಿಜೆಪಿ ನಾಯಕರು ವಾದಿಸಿದ್ದಾರೆ.
‘ಈ ಲೋಪಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸತ್ಯಾಂಶ ಏನು ಎಂಬುದು ಸಿಬಿಐ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ ಎಂದು ಹೇಳಿದ ಅಣ್ಣಾಮಲೈ, ತಮಿಳುನಾಡಿನಲ್ಲಿ ಗುಂಪು ನಿಯಂತ್ರಣದ ಸಮಸ್ಯೆ ಪದೇ ಪದೇ ಬರುತ್ತಿದೆ. ಇದಕ್ಕೆ ಆಡಳಿತಾರೂಢ ಡಿಎಂಕೆ ಸರ್ಕಾರದ ನಿರ್ಲಕ್ಷ್ಯತೆಯೇ ಕಾರಣ ಎಂದು ಟೀಕಿಸಿದ್ದಾರೆ.