Tuesday, September 30, 2025

ಕೊನೆಗೂ ಸಿಕ್ಕಿತು ಶಬರಿಮಲೆ ದ್ವಾರಪಾಲಕ ವಿಗ್ರಹ ಪೀಠ: ಯಾರ ಮನೆಯಲ್ಲಿತ್ತು ಗೊತ್ತೇ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಕಾಣೆಯಾಗಿದ್ದ ಚಿನ್ನದ ಲೇಪನದ ದ್ವಾರಪಾಲಕ ವಿಗ್ರಹದ ಪೀಠವು (ಪೀಠಂ) ಪತ್ತೆಯಾಗಿದೆ.

ಪೀಠ ಕಾಣೆಯಾಗಿದೆ ಎಂದು ದೂರು ನೀಡಿದ್ದ ಪ್ರಾಯೋಜಕ ಉನ್ನಿಕೃಷ್ಣನ್ ಪೊಟ್ಟಿ ಸಂಬಂಧಿ ಮನೆಯಿಂದ ದೇವರಸ್ವಂ ವಿಜಿಲೆನ್ಸ್ ಪೀಠವನ್ನು ವಶಕ್ಕೆ ಪಡೆದುಕೊಂಡಿದ್ದು, ದೂರು ನೀಡಿದ್ದ ಉನ್ನಿಕೃಷ್ಣನ್ ಪೊಟ್ಟಿ ಮೇಲೆಯೇ ಅನುಮಾನ ವ್ಯಕ್ತವಾಗಿದೆ.

ಟಿಡಿಬಿ ಜಾಗೃತ ಮತ್ತು ಭದ್ರತಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ವಿ ನೇತೃತ್ವದ ತಂಡವು ಶನಿವಾರ ವೆಂಜಾರಮೂಡಿನಲ್ಲಿರುವ ಪ್ರಾಯೋಜಕ ಉನ್ನಿಕೃಷ್ಣನ್ ಪೊಟ್ಟಿ ಅವರ ಸಂಬಂಧಿಕರ ಮನೆಯಲ್ಲಿ ಪೀಠವನ್ನು ಪತ್ತೆಹಚ್ಚಿದೆ.

2019ರಲ್ಲಿ ಉನ್ನಿಕೃಷ್ಣನ್​ ಪೊಟ್ಟಿ ಅವರೇ ಪೀಠ ಶಬರಿಮಲೆಯಲ್ಲಿ ಕಾಣುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಬಳಿಕ ಈ ಸಂಗತಿ ಕೇರಳ ಹೈಕೋರ್ಟ್‌ನ ಗಮನಕ್ಕೆ ಬಂದಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿತ್ತು. ಶಬರಿಮಲೆ ವಿಜಿಲೆನ್ಸ್ ತಂಡ ಅರನ್ಮುಳದಲ್ಲಿರುವ ಟಿಡಿಬಿ (TDB) ಸ್ಟ್ರಾಂಗ್‌ರೂಮ್ ಅನ್ನು ಪರಿಶೀಲಿಸಿತ್ತು. ಆದರೆ ಪೀಠವನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.ಅದಾದ ಮೇಲೆ ಇತ್ತೀಚೆಗೆ ದ್ವಾರಪಾಲಕರ ಚಿನ್ನದ ಲೇಪನದ ತಾಮ್ರದ ಫಲಕಗಳ ತೂಕದಲ್ಲಿ ಇಳಿಕೆಯಾಗಿರುವುದನ್ನು ಗಮನಿಸಿದ ಕೇರಳ ಹೈಕೋರ್ಟ್ ಪೀಠವು ತನಿಖೆಗೆ ಆದೇಶಿಸಿದಾಗ ಈ ವಿಷಯ ಮತ್ತೆ ಮುನ್ನಲೆಗೆ ಬಂದಿದೆ.

ಪೀಠವನ್ನು ಪೊಟ್ಟಿಯ ಕೆಲಸಗಾರರಲ್ಲಿ ಒಬ್ಬರ ಮನೆಯಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕಾಣೆಯಾದ ಪೀಠದ ಬಗ್ಗೆ ಮಾಧ್ಯಮ ವರದಿಗಳ ನಂತರ, ಕೆಲಸಗಾರ ಪೊಟ್ಟಿಗೆ ಅದು ತನ್ನ ವಶದಲ್ಲಿದೆ ಎಂದು ತಿಳಿಸಿದ್ದಾನೆ. ನಂತರ ಅದನ್ನು ವೆಂಜರಮೂಡುವಿನಲ್ಲಿರುವ ಪೊಟ್ಟಿಯ ಸಂಬಂಧಿಯ ಮನೆಗೆ ವರ್ಗಾಯಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.