ಹೊಸದಿಗಂತ ವರದಿ,ಚಿತ್ರದುರ್ಗ:
ಪ್ರಸ್ತುತ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನಲ್ಲೇ ಹಿತಶತ್ರುಗಳಿರುತ್ತಾರೆ. ಈ ಕುರಿತು ವಿದ್ಯಾರ್ಥಿಗಳಾದವರು ಎಚ್ಚರ ವಹಿಸಬೇಕೆಂದು ಡಿಐಜಿಪಿ ರವಿ ಡಿ. ಚನ್ನಣ್ಣನವರ್ ಕಿವಿಮಾತು ಹೇಳಿದರು.
ಶರಣ ಸಂಸ್ಕೃತಿ ಉತ್ಸವ-೨೦೨೫ರ ಅಂಗವಾಗಿ ಶ್ರೀ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಜೊತೆಗೇ ಇದ್ದು, ನಮ್ಮನ್ನು ಕಾಲಿನಿಂದ ಒದೆಯುವ ಜನರಿಗೆ ಏನು ಮಾಡಬೇಕು. ಅಂಥವರಿಗೆ ಯಾವ ಆಯುಧಗಳನ್ನು ಬಳಸಬೇಕು. ಅದು ಯಾವುದೆಂದರೆ ಶಿಕ್ಷಣ. ನಮ್ಮ ಬಡತನ ನಮ್ಮ ಬಹುದೊಡ್ಡ ಶತ್ರು. ಅದನ್ನು ಹೊಡೆದೋಡಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.
ಶಿಕ್ಷಣ, ಸಂಘಟನೆ, ಹೋರಾಟದಿಂದ ನಮ್ಮ ಬದುಕು ಕಟ್ಟಿಕೊಳ್ಳಬೇಕು. ಬಾಬಾ ಸಾಹೇಬರ ಮಾತುಗಳನ್ನು ಇಂದು ಮರೆತಿದ್ದೀರಾ. ನಮ್ಮ ಪೂರ್ವಜರು ೮ನೇ, ೧೨ನೇ ಶತಮಾನದಲ್ಲಿ ಹೇಗಿದ್ದರು ಎಂಬುದನ್ನು ತಿಳಿಯಬೇಕು. ನಾವು ಚರಿತ್ರೆಯನ್ನು ಓದಿ ಕಲಿತಿದ್ದೇವೆ. ಬಡತನಕ್ಕೂ ತಿರಸ್ಕಾರ, ಅವಮಾನ ವಂಚನೆ ಇದೆ. ನಮ್ಮನ್ನು ಯಾರು ಉದ್ಧಾರ ಮಾಡುವುದಿಲ್ಲ, ನಮಗೆ ನಾವೇ ಉದ್ಧಾರವಾಗಬೇಕು. ಸೋಮಾರಿತನ, ಆಲಸ್ಯ ಇವುಗಳನ್ನು ಸುಟ್ಟು ಹಾಕಬೇಕು. ಸರಸ್ವತಿ ನಮ್ಮನ್ನಾಳುವ ಜ್ಞಾನ. ಬಡವ ಎಂದು ಕೊರಗಬಾರದು. ಶ್ರೀಮಂತನಾಗಬೇಕು ಎಂದು ಹೇಳಿದರು.
ಧಾರವಾಡದ ಪ್ರಾಧ್ಯಾಪಕರಾದ ಡಾ. ಶಂಭುಹೆಗಡಾಳ್ ಮಾತನಾಡಿ, ಮೊದಲು ನಮಗೆ ನಾವು ರೋಲ್ ಮಾಡೆಲ್‌ಗಳಾಗಬೇಕು. ಮನುಷ್ಯ ಮನುಷ್ಯನಾಗುವುದರಿಂದ ಮಹದೇವನಾಗುತ್ತಾನೆ. ವ್ಯವಸ್ಥೆಯ ಸಂಚಿಗೆ ಯಾರು ಬಲಿಯಾಗಬಾರದು. ನಮಗೆ ಆತ್ಮವಿಶ್ವಾಸ, ಆತ್ಮಬಲ, ಆತ್ಮವಿಕಾಸ, ಆತ್ಮದಅಭಿವೃದ್ದಿ ಇವು ನಮ್ಮ ಬದುಕಿನ ಗುರಿಯಾಗಬೇಕು. ನಮ್ಮ ಕಾಯಕ ನಮಗೆ ನಾಯಕನಾಗಬೇಕು. ಯುವಕರು ಬದಲಾದರೆ ವ್ಯವಸ್ಥೆ ಬದಲಾಗುತ್ತದೆ ಎಂದು ನುಡಿದರು.
ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್ ಮಾತನಾಡಿ, ಯುವಕರು ತಾವು ಬಯಸಿದ್ದನ್ನು ಪಡೆಯುವ ಶಕ್ತಿವಂತರಾಗಿದ್ದಾರೆ. ಯುವಕರು ಭವಿ?ದ ಕನಸು ನನಸಾಗುವಂತಹ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ನಾವು ಆಯ್ಕೆ ಮಾಡಿಕೊಳ್ಳುವ ಮಾರ್ಗವು ನಮ್ಮ ಮುಂದೆ ಇದೆ. ನಮ್ಮ ಭವಿ?ವನ್ನು ಎರಡು ದಿಕ್ಕಿನಲ್ಲಿ ರೂಪಿಸಿಕೊಳ್ಳುವ ವಯಸ್ಸು. ಆಯ್ಕೆ ನಮ್ಮದಾಗಿರಬೇಕು ಎಂದು ನುಡಿದರು.
ಕರ್ನಾಟಕ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಭಾಸ್ಕರ್‌ರಾವ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಎನರ್ಜಿ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಗುರಿ ಮುಖ್ಯ. ಆ ಗುರಿ ಸಾಧನೆಗೆ ಆತ್ಮ ಸ್ಥೈರ್ಯ ಮುಖ್ಯ. ಜೀವನದಲ್ಲಿ ಆಸೆ ಇರಬೇಕು. ನಾನು ಪುಸ್ತಕಗಳಿಗಿಂತ ಹೆಚ್ಚಿನದಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದೆ. ಪುಸ್ತಕದ ಜ್ಞಾನ ಮುಖ್ಯವಲ್ಲ. ಹೊರಗಿನ ಪ್ರಪಂಚವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾದಂಬರಿಕಾರರು ಡಾ.ಜಿ.ಬಿ.ಹರೀಶ್, ವಿಸ್ತಾರ ಜಿಂದಗಿ ಮಹೇಶ್ ಮಾಸಾಳ್ ಮಾತನಾಡಿದರು. ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಮಹಾಸ್ವಾಮಿಗಳು, ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು, ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು, ಡಾ.ಜಿ.ಅನೀಸ್, ಗಾಯತ್ರಿ ಶಿವರಾಮ್, ರುದ್ರಮುನಿಯಪ್ಪ, ಡಾ.ರಾಜೇಶ್ ಉಪಸ್ಥಿತರಿದ್ದರು.