Tuesday, September 30, 2025

ನಖ್ವಿ ಹೊಸ ನಾಟಕ ಶುರು: ಟ್ರೋಫಿ ಬೇಕಂದ್ರೆ ಔಪಚಾರಿಕ ಸಮಾರಂಭ ನಡೀಬೇಕಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಐತಿಹಾಸಿಕ ಜಯ ಸಾಧಿಸಿದೆ. ಇದೇ ಮೊದಲ ಬಾರಿಗೆ ಒಂದೇ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸತತ ಮೂರು ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿತು. ಈ ಜಯದ ಸಂಭ್ರಮದ ನಡುವೆ, ಟ್ರೋಫಿ ಹಸ್ತಾಂತರದ ವೇಳೆ ಹೊಸ ವಿವಾದ ಸೃಷ್ಟಿಯಾಗಿದೆ.

ಫೈನಲ್ ಪಂದ್ಯದ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ಹಿಡಿದು ಟೀಮ್ ಇಂಡಿಯಾ ಆಟಗಾರರಿಗೆ ಹಸ್ತಾಂತರ ಮಾಡಲು ಕಾಯುತ್ತಿದ್ದರು. ಆದರೆ ಭಾರತೀಯ ಆಟಗಾರರು ಮೈದಾನದಲ್ಲೇ ವಿಶ್ರಾಂತಿ ಪಡೆಯುತ್ತಾ ತಮ್ಮ ಪಾಡಿಗೆ ಬ್ಯುಸಿಯಾಗಿದ್ದರು. ಇದರಿಂದ ಅಸಮಾಧಾನಗೊಂಡ ನಖ್ವಿ, ಏಷ್ಯಾಕಪ್ ಟ್ರೋಫಿ ಮತ್ತು ಮೆಡೆಲ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆ ಇದೀಗ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ನಖ್ವಿ ಭಾರತಕ್ಕೆ ಟ್ರೋಫಿ ವಾಪಸ್ ಮಾಡಲು ಷರತ್ತು ವಿಧಿಸಿದ್ದಾರೆ. ಅವರು “ಔಪಚಾರಿಕ ಸಮಾರಂಭ” ನಡೆದ ನಂತರವೇ ಟ್ರೋಫಿ ಹಾಗೂ ಪದಕಗಳನ್ನು ಹಸ್ತಾಂತರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಇಂತಹ ಸಮಾರಂಭ ನಡೆಯುವ ಸಾಧ್ಯತೆ ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.

ಈ ನಡುವೆ ಬಿಸಿಸಿಐ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲು ನಿರ್ಧರಿಸಿದೆ. ಜೊತೆಗೆ ಸೆಪ್ಟೆಂಬರ್ 30ರಂದು ದುಬೈನಲ್ಲಿ ನಡೆಯಲಿರುವ ಎಸಿಸಿ ಸಭೆಯಲ್ಲಿ ಭಾರತಕ್ಕೆ ಟ್ರೋಫಿ ಮತ್ತು ಮೆಡೆಲ್‌ಗಳನ್ನು ಶೀಘ್ರ ಹಸ್ತಾಂತರಿಸಬೇಕೆಂದು ಒತ್ತಾಯಿಸಲಿದೆ.

ಭಾರತೀಯ ತಂಡ ಕ್ರೀಡಾಂಗಣದಲ್ಲಿ ದಾಖಲೆ ಜಯ ಸಾಧಿಸಿದರೂ, ಟ್ರೋಫಿ ಹಸ್ತಾಂತರದ ವಿವಾದ ಈಗ ಏಷ್ಯಾಕಪ್ ಫೈನಲ್‌ನ ಮೆರಗು ಕಡಿಮೆ ಮಾಡಿದೆ. ಬಿಸಿಸಿಐ ಮುಂದಿನ ಕ್ರಮ ಏನು ಎಂಬುದರತ್ತ ಅಭಿಮಾನಿಗಳ ದೃಷ್ಟಿ ನೆಟ್ಟಿದೆ.