Tuesday, September 30, 2025

ಕಳಪೆ ಕಾಮಗಾರಿ: ಆಸ್ಪತ್ರೆಯ ನೂತನ ಕಟ್ಟಡದ ನೆಲದ ಭಾಗ ಕುಸಿತ, ಸಾರ್ವಜನಿಕರ ಆಕ್ರೋಶ

ಹೊಸದಿಗಂತ ಕಾರವಾರ:

ಕಳಪೆ ಕಾಮಗಾರಿಯ ಆರೋಪಗಳು ಕೇಳಿ ಬರುತ್ತಿದ್ದ ಕಾರವಾರ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡದ ಎರಡನೆಯ ಮಹಡಿಯಲ್ಲಿರುವ ವೈದ್ಯರ ಹಾಗೂ ಉಪನ್ಯಾಸಕರ ಕೊಠಡಿ ಇರುವ ವಿಭಾಗದ ಸಿಮೆಂಟ್ ನೆಲದ ಒಂದು ಭಾಗ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.


ಶಸ್ತ್ರ ಚಿಕಿತ್ಸಾ ಕೊಠಡಿ ಇರುವ ಪಕ್ಕದಲ್ಲೇ ಕಟ್ಟಡದ ಒಂದು ಭಾಗ ಕುಸಿದ ಘಟನೆ ನಡೆದಿದ್ದು ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸುಮಾರು 198 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರವಾರ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು ಕಟ್ಟಡ ಪೂರ್ಣಗೊಂಡು ಎರಡು ವರ್ಷಗಳು ಕಳೆದರೂ ಉದ್ಘಾಟನೆಯ ಭಾಗ್ಯ ಕಾಣದ ಈ ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿರುವ ಕುರಿತಂತೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು.


ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡ ಶಿಥಿಲಗೊಂಡಿರುವ ಕಾರಣ ಹೊಸ ಕಟ್ಟಡದ ಎರಡು ಮಹಡಿಗಳಲ್ಲಿ ಆಸ್ಪತ್ರೆಗೆ ಸಂಬಂಧಿತ ಚಟುವಟಿಕೆಗಳನ್ನು ಆರಂಭಿಸಲಾಗಿತ್ತು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡವೊಂದು ಎರಡೇ ವರ್ಷಗಳಲ್ಲಿ ಕುಸಿಯಲು ಆರಂಭವಾಗಿದ್ದು ಕಳಪೆ ಕಾಮಗಾರಿ ಕುರಿತಂತೆ ತನಿಖೆಯಾಗಲಿ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರತೊಡಗಿದೆ.