Friday, October 3, 2025

ಚೆನ್ನೈನಲ್ಲಿ ಭೀಕರ ದುರಂತ: ಕಟ್ಟಡ ಕುಸಿತಕ್ಕೆ ಒಂಬತ್ತು ಮಂದಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೆನ್ನೈ ಸಮೀಪದ ಎಣ್ಣೋರ್ ಉಷ್ಣ ವಿದ್ಯುತ್ ಸ್ಥಾವರ ಘಟಕದೊಳಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.ಇನ್ನೂ ಬಹಳ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಟಾನ್ಲೀ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಐವರು ಮೃತಪಟ್ಟಿರುವುದಲ್ಲದೆ ಇನ್ನೂ ಕೆಲವರು ಜೀವನ್ಮರಣ ಹೋರಾಟದಲ್ಲಿರುವುದು ತಿಳಿದುಬಂದಿದೆ.

ಎಣ್ಣಾರ್ ಥರ್ಮಲ್ ಪವರ್ ಸ್ಟೇಷನ್ ಚೆನ್ನೈ ಸಮೀಪದ ತಿರುವಳ್ಳೂರು ಜಿಲ್ಲೆಯ ಮೀಂಜೂರು ಬಳಿಯ ಊರನಂಪೆಡು ಗ್ರಾಮದಲ್ಲಿದೆ. ಈ ವಿದ್ಯುತ್ ಸ್ಥಾವರದ ನಾಲ್ಕನೇ ಹಂತದ ವಿಸ್ತರಣಾ ಕಾಮಗಾರಿ ಕೆಲವು ವರ್ಷಗಳಿಂದಲೂ ನಡೆಯುತ್ತಿದೆ. ಉತ್ತರ ಭಾರತ ಮೂಲದ ಬಹಳಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಇಂದು ಮಂಗಳವಾರ ಬಾಯ್ಲರ್ ವಿಭಾಗದಲ್ಲಿ ಬೃಹತ್ ಕಮಾನು ನಿರ್ಮಾಣ ಕಾರ್ಯದಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ನಿರತರಾಗಿದ್ದರು. ಮುಂಗಾಗದಲ್ಲಿ ನಿರ್ಮಿಸಲಾಗಿದ್ದ ಸ್ಕಫೋಲ್ಡ್ ಕಳಚಿ ಬಿದ್ದಿತು. ಅನೇಕ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡರೆನ್ನಲಾಗಿದೆ.

ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಚೆನ್ನೈನ ರಾಯಪುರಂನಲ್ಲಿರುವ ಸ್ಟಾನ್ಲೀ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಐವರು ಸಾವನ್ನಪ್ಪಿದರು. ಇಲ್ಲಿಯವರೆಗೆ ಸಾವಿನ ಸಂಖ್ಯೆ 9ಕ್ಕೆ ಏರಿದೆ.