ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಕೇವಲ 15 ದಿನಗಳ ಅಂತರದಲ್ಲಿ 6 ಮಕ್ಕಳು ಕಿಡ್ನಿ ಫೇಲ್ ಆಗಿ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಈ ಬೆಚ್ಚಿಬೀಳಿಸುವ ಹೃದಯ ವಿದ್ರಾವಕ ದುರಂತ ಸಂಭವಿಸಿದ್ದು, ಕಳೆದ 15 ದಿನಗಳಲ್ಲಿ ಆರು ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಋತುಮಾನದ ಜ್ವರದ ಸಾಮಾನ್ಯ ಸಮಸ್ಯೆಗಳಂತೆ ಕಂಡುಬಂದಿದ್ದ ಈ ಘಟನೆ ಈಗ ಭೀಕರ ತಿರುವು ಪಡೆದುಕೊಂಡಿದೆ. ಮಕ್ಕಳಿಗೆ ನೀಡಿದ ಕೆಮ್ಮಿನ ಸಿರಪ್ ನ ಅಡ್ಡಪರಿಣಾಮದಿಂದಾಗಿ ಮಕ್ಕಳು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಡಳಿತವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ತಂಡವನ್ನು ಪರೀಕ್ಷೆಗೆ ಕರೆದಿದೆ. ಭೋಪಾಲ್‌ನ ಆರೋಗ್ಯ ಇಲಾಖೆಯ ಇಬ್ಬರು ಸದಸ್ಯರ ತಂಡವು ಪರಾಸಿಯಾ, ನ್ಯೂಟನ್ ಚಿಕ್ಲಿ ಮತ್ತು ಹತ್ತಿರದ ಹಳ್ಳಿಗಳಿಗೆ ಆಗಮಿಸಿದೆ. ಅಧಿಕಾರಿಗಳು ಕುಟುಂಬಗಳನ್ನು ಸಂದರ್ಶಿಸುತ್ತಿದ್ದಾರೆ, ಔಷಧ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಇತರ ಪೀಡಿತ ಮಕ್ಕಳನ್ನು ಗುರುತಿಸಲು ಮನೆ-ಮನೆಗೆ ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ಕಾರಣ ಎಂದು ಶಂಕಿಸಲಾಗುತ್ತಿದ್ದು, ವಿಷಕಾರಿ ಡೈಥಿಲೀನ್ ಗ್ಲೈಕೋಲ್ ಬೆರೆಸಿದ ಕಲುಷಿತ ಕೆಮ್ಮಿನ ಸಿರಪ್ ಸಾವುಗಳಿಗೆ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಮಕ್ಕಳ ಮೂತ್ರಪಿಂಡದ ಬಯಾಪ್ಸಿ ಪರೀಕ್ಷೆಯಲ್ಲಿ ಔಷಧೀಯ ವಿಷಕ್ಕೆ ಸಂಬಂಧಿಸಿದ ವಿಷಕಾರಿ ರಾಸಾಯನಿಕವಾದ ಡೈಥಿಲೀನ್ ಗ್ಲೈಕಾಲ್ ಮಾಲಿನ್ಯ ಇರುವುದು ಬೆಳಕಿಗೆ ಬಂದಾಗ ಮಹತ್ವದ ತಿರುವು ಸಿಕ್ಕಿತು. ಹೆಚ್ಚಿನ ಸಂತ್ರಸ್ಥ ಮಕ್ಕಳಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸಿರಪ್‌ಗಳನ್ನು ನೀಡಲಾಗಿತ್ತು.