ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ಏಕ ರೂಪದ ದರ ನಿಗದಿಪಡಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ವಿಧಿಸಿರುವ ತಡೆ ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಮೂಲ ಅರ್ಜಿ ಇತ್ಯರ್ಥವಾಗುವವರೆಗೂ ಚಿತ್ರ ವೀಕ್ಷಕರು ಪಾವತಿಸುವ ಮೊತ್ತದ ಕುರಿತ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು. ಪ್ರತಿ ತಿಂಗಳ 15ರ ಒಳಗಾಗಿ ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ಗೆ ಇದೇ ವೇಳೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ಏಕ ಸದಸ್ಯ ಪೀಠದ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಜೊತೆಗೆ, ಏಕ ಸದಸ್ಯ ಪೀಠದ ಮುಂದೆ ವಿಚಾರಣಾ ಹಂತದಲ್ಲಿರುವ ಮೂಲ ಅರ್ಜಿಯ ಅಂತಿಮ ಆದೇಶ ಮಲ್ಟಿಫ್ಲೆಕ್ಸ್ ಅಸೋಷಿಯೇಷನ್ಗೆ ವಿರುದ್ಧವಾಗಿ ಬಂದಲ್ಲಿ 200 ರೂಪಾಯಿಗಳಿಗೂ ಹೆಚ್ಚುವರಿಯಾಗಿ ಪಡೆದುಕೊಳ್ಳುವ ಮೊತ್ತವನ್ನು ಗ್ರಾಹಕರಿಗೆ ಹಿಂದಿರುಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಪೀಠ ತಿಳಿಸಿದೆ. ಒಂದು ವೇಳೆ, ಈ ಆದೇಶ ಪಾಲಿಸದ ಮಲ್ಟಿಫ್ಲೆಕ್ಸ್ಗಳಿಗೆ ಏಕ ಸದಸ್ಯ ಪೀಠ ನೀಡಿರುವ ಮಧ್ಯಂತರ ತಡೆ ಆದೇಶ ಅನ್ವಯವಾಗುವುದಿಲ್ಲ ಎಂದು ಇದೇ ವೇಳೆ ಪೀಠ ಸ್ಪಷ್ಟಪಡಿಸಿದೆ.