ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂಬ ಹೆಸರಿನಿಂದ ಖ್ಯಾತಿ ಪಡೆದಿರುವ ಬೆಂಗಳೂರು, ತಂತ್ರಜ್ಞಾನ ಹಾಗೂ ಪ್ರಗತಿಪರ ನಗರ ಎಂಬ ಹೆಸರನ್ನು ಗಳಿಸಿದ್ದರೂ, ಕೆಲ ಅಪರಾಧ ವರದಿಗಳಿಂದ ಕಳವಳಕಾರಿ ಸ್ಥಿತಿಗೂ ಗುರಿಯಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ.
2023ರ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಒಟ್ಟು 1,013 ವರದಕ್ಷಿಣೆ ಸಂಬಂಧಿತ ದೂರುಗಳು ದಾಖಲಾಗಿವೆ. ಇದು ಪಾಟ್ನಾ (104 ಪ್ರಕರಣಗಳು) ಮತ್ತು ಲಕ್ನೋ (19 ಪ್ರಕರಣಗಳು) ಸೇರಿದಂತೆ ಇತರ 18 ಮೆಟ್ರೋ ನಗರಗಳಿಗಿಂತಲೂ ಹೆಚ್ಚು. ತಾವು ಅನುಭವಿಸಿದ ದೌರ್ಜನ್ಯವನ್ನು ಸಾರ್ವಜನಿಕವಾಗಿ ಹೇಳಲು ಮಹಿಳೆಯರು ಮುಂದಾಗುತ್ತಿರುವುದು ಈ ಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ, ಕರ್ನಾಟಕದ ಒಟ್ಟಾರೆ ಪರಿಸ್ಥಿತಿ ಕಳವಳಕಾರಿ ದಿಕ್ಕಿನಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು 14% ಹೆಚ್ಚಾಗಿದ್ದರೆ, ಬೆಂಗಳೂರಿನಲ್ಲಿ ಮಾತ್ರ ಮಹಿಳೆಯರ ಮೇಲಿನ ಅಪರಾಧ ಪ್ರಮಾಣ 24% ಏರಿಕೆಯಾಗಿದೆ. ಹಿಂಸಾಚಾರ, ಕೊಲೆ, ಅಪಹರಣ, ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ಅಪರಾಧ ಪ್ರಮಾಣ ಏರಿಕೆಯಾಗಿರುವುದು ವರದಿಯಾಗಿದೆ.
ಅಪರಾಧಗಳಷ್ಟೇ ಅಲ್ಲ, ರಸ್ತೆ ಅಪಘಾತಗಳು ಮತ್ತು ಆತ್ಮಹತ್ಯೆಗಳ ಸಂಖ್ಯೆ ಕೂಡ ಗಂಭೀರವಾಗಿದೆ. 2023ರಲ್ಲಿ ರಸ್ತೆ ಅಪಘಾತಗಳಲ್ಲಿ 12,322 ಮಂದಿ ಜೀವ ಕಳೆದುಕೊಂಡರೆ, 13 ಸಾವಿರಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿರುವುದು ದಾಖಲಾಗಿದೆ.