ಬೆಳಗ್ಗೆ ತಿಂಡಿಗೆ ಬೇಗನೆ, ಹೆಲ್ತಿ ಹಾಗೂ ಟೇಸ್ಟಿಯಾಗಿ ಏನಾದರೂ ಮಾಡ್ಬೇಕು ಅಂತ ಯೋಚಿಸ್ತಾ ಇದ್ದೀರಾ? ಹಾಗಾದ್ರೆ ನಿಮಗಾಗಿ ಆರೋಗ್ಯದಿಂದ ಕೂಡಿದ ಪಾಲಕ್ ಪೂರಿ ಮಾಡುವ ಸುಲಭ ವಿಧಾನ ಇಲ್ಲಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಪೂರಿ, ಬ್ರೇಕ್‍ಫಾಸ್ಟ್‌ಗೆ ಪರ್ಫೆಕ್ಟ್ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ಪಾಲಕ್ ಸೊಪ್ಪು – 2 ಕೈಮುಷ್ಟಿ
ಗೋದಿ ಹಿಟ್ಟು – 1 ರಿಂದ 1.5 ಕಪ್
ಓಂ ಕಾಳು (ಅಜ್ವೈನ್) – ಅರ್ಧ ಚಮಚ
ಹಸಿಮೆಣಸು – 2 ರಿಂದ 4
ಉಪ್ಪು – ರುಚಿಗೆ ತಕ್ಕಷ್ಟು
ನೀರು – 1/4 ರಿಂದ 1/2 ಕಪ್ (ಅವಶ್ಯಕತೆ ಇದ್ರೆ)
ಎಣ್ಣೆ – ಕರಿಯಲು
ಮಾಡುವ ವಿಧಾನ:
ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ನೀರಿನಲ್ಲಿ ಸ್ವಲ್ಪ ಬೇಯಿಸಿಕೊಳ್ಳಿ. ನಂತರ ತಣ್ಣಗಾಗಲು ಬಿಡಿ. ಬೇಯಿಸಿದ ಪಾಲಕ್ ಹಾಗೂ ಹಸಿಮೆಣಸನ್ನು ಮಿಕ್ಸರ್‌ನಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಓಂ ಕಾಳು, ಉಪ್ಪು ಹಾಗೂ ಪಾಲಕ್ ಪೇಸ್ಟ್ ಹಾಕಿ. ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಮೃದುವಾಗಿ ಹಿಟ್ಟು ಕಲಸಿ. ಹಿಟ್ಟನ್ನು 5-10 ನಿಮಿಷ ಮುಚ್ಚಿ ಇಟ್ಟು, ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಪೂರಿ ಆಕಾರಕ್ಕೆ ಲಟ್ಟಿಸಿಕೊಂಡು ಬಿಸಿ ಎಣ್ಣೆಯಲ್ಲಿ ಪೂರಿಗಳನ್ನು ಕರಿಯಿರಿ.