ಹೊಸದಿಗಂತ ವರದಿ ಕುಮಟಾ:
ಮೂರೂರಿನವರಾದ ನಿವೃತ್ತ ಪ್ರಾಧ್ಯಾಪಕ ಇತಿಹಾಸ ಮತ್ತು ಶಿಕ್ಷಣ ತಜ್ಞ ಡಾ. ಎಲ್. ಜಿ. ಭಟ್ಟ (83)ಗುರುವಾರ ರಾತ್ರೆ ನಿಧನರಾದರು. ಕಾರ್ಕಳದ ಭುವನೇಂದ್ರ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ವರ್ಗಾವಣೆ ನಂತರ ಎಸ್. ಡಿ. ಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದರು.
ಸಾಹಿತ್ಯಕ ಕ್ಷೇತ್ರ ದಲ್ಲಿ ಅಳ ಜ್ಞಾನ ಹೊಂದಿದ್ದ ಇವರು ಹಾಲಕ್ಕಿ ಜನಾಂಗದ ಕುರಿತು ಅವರ ಸಂಪ್ರದಾಯ, ಆಚಾರ, ಹಾಲಕ್ಕಿ ಜೀವನ ಕುರಿತು ಅನೇಕ ಕೃತಿಯನ್ನು ರಚಿಸಿದ್ದರು. ‘ಹಾಲಕ್ಕಿ ಪಾಯಸ ‘ ಕೃತಿಯು ಹಾಲಕ್ಕಿ ಜೀವನದ ಸಂಪೂರ್ಣ ಮಾಹಿತಿ ನೀಡುತ್ತದೆ.
ಹೊಸದಿಗಂತ ದಿನಪತ್ರಿಕೆಯಲ್ಲಿ ಕಾರ್ಕಳ ಮತ್ತು ಹೊನ್ನಾವರದಲ್ಲಿ 20 ಕ್ಕೂ ಹೆಚ್ಚು ವರ್ಷ ವರದಿಗಾರರಾಗಿ ಸೇವೆಯನ್ನು ಸಲ್ಲಿಸಿದ್ದರು. ವಿವಿಧ ಪತ್ರಿಕೆಗಳಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಇವರ ಲೇಖನಗಳು ಪ್ರಕಟಿತವಾಗಿದ್ದವು. ಇತಿಹಾಸ ವಿಷಯದಲ್ಲಿ ಅತ್ಯಂತ ಹೆಚ್ಚು ಪರಿಣತಿ ಹೊಂದಿದ್ದು ಜಿಲ್ಲೆಯ ಸ್ಮಾರಕಗಳು, ಅರಬ್ಬಿ ಸಮುದ್ರದಲ್ಲಿರುವ ನಡುಗೆಡ್ಡೆ, ಕೋಟೆಗಳು ಇತ್ಯಾದಿ ಬಗ್ಗೆ ವಿಶೇಷ ಲೇಖನವನ್ನು ಬರೆಯುತ್ತಿದ್ದರು.
ಇವರು ರಚಿಸಿದ ಇತಿಹಾಸ ಪುಸ್ತಕಗಳು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿದ್ದವು. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನೂರಕ್ಕೂ ಹೆಚ್ಚು ಟೆಕ್ಸ್ಟ್ ಬುಕ್ ಅನ್ನು ರಚಿಸಿದ ಕೀರ್ತಿಯು ಇವರದಾಗಿತ್ತು. ಶ್ರೀ ರಾಮಚಂದ್ರಪುರ ಮಠದ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೂರುರಿನ ವಿದ್ಯಾ ನಿಕೇತನ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದರು. ಇವರ ಸಾಹಿತ್ಯದ ಹಾಗೂ ಸಮಾಜ ಸೇವೆಗಾಗಿ ನೂರಕ್ಕೂ ಹೆಚ್ಚು ಸನ್ಮಾನಗಳಿಗೆ ಪಾತ್ರರಾಗಿದ್ದು, ಇತಿಹಾಸ ವಿಷಯದ ಮೇಲೆ ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜಿನಲ್ಲಿ 300ಕ್ಕೂ ಹೆಚ್ಚು ವಿಶೇಷ ಉಪನ್ಯಾಸವನ್ನು ನೀಡಿದ್ದರು. ಮೃತರು ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಮಗನನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.