ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ರಹಸ್ಯಮಯ ಘಟನೆ ಬೆಳಕಿಗೆ ಬಂದಿದೆ. ಕೊತ್ತನೂರು ಬಳಿಯ ಬೈರತಿ ಬಂಡೆ ರಸ್ತೆಯಲ್ಲಿರುವ ನಿರ್ಮಾಣ ಹಂತದ ಅಪಾರ್ಟ್ಮೆಂಟ್‌ನಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ದೊಡ್ಡಗುಬ್ಬಿಯ ಶ್ರೀಧರ್ ಅವರಿಗೆ ಸೇರಿದ್ದ ಈ ಅಪಾರ್ಟ್ಮೆಂಟ್‌ನಲ್ಲಿ ಶುಕ್ರವಾರ ಸಂಜೆ ಕಾರ್ಮಿಕರು ಕ್ಲೀನಿಂಗ್ ಮಾಡುವ ವೇಳೆ ನಾಲ್ಕನೇ ಮಹಡಿಯಲ್ಲಿ ಅಸ್ಥಿಪಂಜರ ಪತ್ತೆಯಾಯಿತು. ಮೃತದೇಹವು ಪ್ಯಾಂಟ್ ಮತ್ತು ಶರ್ಟ್ ಧರಿಸಿ ಮಲಗಿದ ಸ್ಥಿತಿಯಲ್ಲಿದ್ದುದರಿಂದ, 35 ರಿಂದ 40 ವರ್ಷದ ಗಂಡಸಿನ ಅಸ್ಥಿಪಂಜರವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಸುಮಾರು 6-8 ತಿಂಗಳ ಹಿಂದೆ ಸಾವನ್ನಪ್ಪಿರಬಹುದು ಎನ್ನಲಾಗಿದೆ.
ನಿರ್ಮಾಣ ಹಂತದ ಕೆಲಸ ಕೆಲವು ತಿಂಗಳುಗಳಿಂದ ನಿಂತಿತ್ತು. ಇತ್ತೀಚೆಗೆ ಪುನಃ ಕಾರ್ಯ ಆರಂಭವಾದಾಗ ಶುದ್ಧೀಕರಣ ಕಾರ್ಯದಲ್ಲಿ ಮಣ್ಣು ಹಾಗೂ ಚೀಲ ತೆಗೆದಾಗ ಅಸ್ಥಿಪಂಜರ ಪತ್ತೆಯಾಯಿತು. ಇನ್ನೂ ಶವದ ಮೇಲೆ ಉದ್ದೇಶಪೂರ್ವಕವಾಗಿ ಚೀಲ ಮತ್ತು ಮಣ್ಣು ಹಾಕಲಾಗಿದ್ದುದರಿಂದ, ಘಟನೆ ರಹಸ್ಯಕ್ಕೆ ಕಾರಣವಾಗಿದೆ.
ಅಪಾರ್ಟ್ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ಈ ಕುರಿತು ತಕ್ಷಣ ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಅಸ್ಥಿಪಂಜರವನ್ನು ಎಫ್‌ಎಸ್‌ಎಲ್‌ಗೆ ರವಾನಿಸಿದರು. ಜೊತೆಗೆ ಸೋಕೋ ಹಾಗೂ ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿದೆ.
ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ (UDR) ದಾಖಲಿಸಲಾಗಿದೆ. ಮೃತ ವ್ಯಕ್ತಿಯ ಗುರುತು, ವಿಳಾಸ ಮತ್ತು ಸಾವಿನ ನಿಜವಾದ ಕಾರಣ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ.