ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಮುಕ್ತಾಯವಾದ ಪುರುಷರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ–ಪಾಕಿಸ್ತಾನ ನಡುವಿನ ಮುಖಾಮುಖಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಅದೇ ವಿವಾದದ ನಂಟು ಮಹಿಳಾ ಏಕದಿನ ವಿಶ್ವಕಪ್‌ಗೂ ತಲುಪಿದೆ. ಭಾರತವೇ ಆತಿಥ್ಯ ವಹಿಸಬೇಕಾಗಿದ್ದ ಈ ಬಾರಿ ಟೂರ್ನಿಯನ್ನು ಪಾಕ್ ಜೊತೆಗಿನ ರಾಜತಾಂತ್ರಿಕ ಉದ್ವಿಗ್ನತೆ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಆಯೋಜಿಸಲಾಗಿದೆ.
ಇಂದು ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಮೈದಾನಕ್ಕಿಳಿದಿವೆ. ಟಾಸ್‌ನಲ್ಲಿ ಪಾಕ್ ನಾಯಕಿ ಫಾತಿಮಾ ಸನಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಭಾರತಕ್ಕೆ ಬ್ಯಾಟಿಂಗ್ ಅವಕಾಶ ದೊರಕಿದೆ. ಆದರೆ ಟಾಸ್ ವೇಳೆ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಪಾಕ್ ನಾಯಕಿಯೊಂದಿಗೆ ಕೈಕುಲುಕದೇ ಹಿಂತಿರುಗಿದ ಘಟನೆ ಮತ್ತೊಮ್ಮೆ ವಿವಾದದ ಕಿಡಿ ಹಚ್ಚಿದೆ. ಇದರಿಂದ ಪಾಕ್ ತಂಡದವರು ಸಂಕೋಚಕ್ಕೆ ಒಳಗಾದರು.
ಟೀಂ ಇಂಡಿಯಾದ ಪರ ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲಿನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೊಡ್ರಿಗ್ಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಸ್ನೇಹ್ ರಾಣಾ, ರೇಣುಕಾ ಸಿಂಗ್, ಕ್ರಾಂತಿ ಗೌಡ್ ಹಾಗೂ ಶ್ರೀ ಚಾರಣಿ ಮೈದಾನಕ್ಕಿಳಿದಿದ್ದಾರೆ.
ಪಾಕ್ ಪರ ಮುನಿಬಾ ಅಲಿ, ಸದಾಫ್ ಶಮಾಸ್, ಸಿದ್ರ್ ಅಮೀನ್, ರಮೆನ್ ಶಮೀಮ್, ಆಲಿಯಾ ರಿಯಾಜ್, ಸಿದ್ಧ ನವಾಜ್, ಫಾತಿಮಾ ಸನಾ, ನಟಾಲಿಯಾ ಪರ್ವೈಜ್, ಡಯಾನಾ ಬೇಗ್, ನಶ್ರ್ ಸಂಧು ಹಾಗೂ ಸಾಲಿಯಾ ಇಕ್ಬಾಲ್ ತಂಡದಲ್ಲಿ ಇದ್ದಾರೆ.
ಮಹಿಳಾ ವಿಶ್ವಕಪ್‌ನಲ್ಲಿ ಭಾರತ–ಪಾಕ್ ನಡುವಿನ ಈ ಪಂದ್ಯ ಈಗಾಗಲೇ ಕ್ರೀಡೆಗೆ ಮೀರಿದ ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮತ್ತಷ್ಟು ವಿವಾದಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.