ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ರ ಏಕದಿನ ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ನಡುವಿನ ಮ್ಯಾಚ್ ವೇಳೆ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಬಹಳಷ್ಟು ಸೊಳ್ಳೆಗಳ ಇಂಟ್ರಿಕೊಟ್ಟಿದ್ದು, ಇದರಿಂದಾಗಿ ಆಟಕ್ಕೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹೀಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮೈದಾನದಲ್ಲಿ ಕೀಟನಾಶಕವನ್ನು ಸಿಂಪಡಿಸಲು 15 ನಿಮಿಷಗಳ ಕಾಲ ಆಟವನ್ನು ನಿಲ್ಲಿಸಬೇಕಾಯಿತು.

ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಪಿಚ್ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಕೀಟಗಳು ಮತ್ತು ಸೊಳ್ಳೆಗಳು ಹಾರಾಡಲು ಆರಂಭಿಸಿದವು. ಇದರಿಂದ ಟೀಂ ಇಂಡಿಯಾ ಆಟಗಾರ್ತಿಯರಿಗೆ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿತ್ತು. ಇತ್ತ ಪಾಕಿಸ್ತಾನದ ಆಟಗಾರ್ತಿಯರಿಗೂ ಬೌಲಿಂಗ್ ಮಾಡಲು ಕಷ್ಟವಾಗುತ್ತಿತ್ತು. ಇದರಿಂದ ಪಂದ್ಯವನ್ನು 2-3 ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು. ಇದಾದ ನಂತರ ಪಂದ್ಯ ಸ್ವಲ್ಪ ಸಮಯದವರೆಗೆ ನಡೆಯಿತು. ಆದರೆ ಕೀಟಗಳ ಕಾಟ ಮುಂದುವರೆದು, 34 ನೇ ಓವರ್ ನಂತರ ಅಂಪೈರ್‌ಗಳು ಮತ್ತೆ ಪಂದ್ಯವನ್ನು ನಿಲ್ಲಿಸಬೇಕಾಯಿತು.
ಭಾರತ ಮತ್ತು ಪಾಕಿಸ್ತಾನಿ ಆಟಗಾರ್ತಿಯರು ಮೈದಾನದಿಂದ ಹೊರಹೋಗಬೇಕಾಯಿತು. ತಕ್ಷಣವೇ ಮೈದಾನದ ಮೇಲೆ ಕೀಟ ನಾಶಕವನ್ನು ಸಿಂಪಡಿಸಲಾಯಿತು. ಆಟಗಾರ್ತಿಯರು ಹೊರಟುಹೋದ ತಕ್ಷಣ, ಮುಖವಾಡ ಧರಿಸಿದ ಮೈದಾನದ ಸಿಬ್ಬಂದಿ ಕೀಟಗಳನ್ನು ಅಲ್ಲಿಂದ ಓಡಿಸಲು ಕ್ರೀಡಾಂಗಣದಾದ್ಯಂತ ಯಂತ್ರದಿಂದ ಹೊಗೆಯನ್ನು ಸಿಂಪಡಿಸಲು ಪ್ರಾರಂಭಿಸಿದರು.