ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಪುರದ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟೋರೇಜ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಾಗ 11 ರೋಗಿಗಳು ನ್ಯೂರೋ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಟ್ರಾಮಾ ಸೆಂಟರ್ ಉಸ್ತುವಾರಿ ಡಾ. ಅನುರಾಗ್ ಧಾಕಡ್ ಹೇಳಿದ್ದಾರೆ.
ಮೃತರನ್ನು ಪಿಂಟು (ಸಿಕಾರ್‌ನವರು), ದಿಲೀಪ್ (ಜೈಪುರದ ಆಂಧಿಯವರು), ಶ್ರೀನಾಥ್, ರುಕ್ಮಿಣಿ, ಖುರ್ಮಾ (ಎಲ್ಲರೂ ಭರತ್‌ಪುರದವರು) ಮತ್ತು ಬಹದ್ದೂರ್ (ಜೈಪುರದ ಸಂಗನೇರ್‌ನವರು) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಇತರ ಹದಿನಾಲ್ಕು ರೋಗಿಗಳನ್ನು ಬೇರೆ ಐಸಿಯುಗೆ ದಾಖಲಿಸಲಾಗಿದೆ ಮತ್ತು ಎಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು ಎಂದು ಡಾ. ಧಾಕಡ್ ಹೇಳಿದರು.
ಬೆಂಕಿಯ ಕೆನ್ನಾಲಿಗೆಗೆ ಆ ಪ್ರದೇಶದಲ್ಲಿ ಸಂಗ್ರಹಿಸಲಾಗಿದ್ದ ವಿವಿಧ ದಾಖಲೆಗಳು, ಐಸಿಯು ಉಪಕರಣಗಳು, ರಕ್ತದ ಮಾದರಿ ಟ್ಯೂಬ್‌ಗಳು ಮತ್ತು ಇತರ ವಸ್ತುಗಳು ಸುಟ್ಟುಹೋಗಿವೆ. ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿ ಸಹಾಯಕರು ರೋಗಿಗಳನ್ನು ಸ್ಥಳಾಂತರಿಸಿದರು. ಮೊದಲಿಗೆ ಕಟ್ಟಡದ ಹೊರಗೆ ಕರೆತರಲಾಯಿತು.