Sunday, October 12, 2025

ಮಹಿಳಾ ವಿಶ್ವಕಪ್ ! ಭಾರತದ ಮುಂದೆ ಮಂಡಿಯೂರಿದ ಪಾಕ್: 88 ರನ್ ಗಳ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಪ್ರತಿಷ್ಠೆಯ ಹೋರಾಟದ ನಡುವೆ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ 88 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ತನ್ನ ಅಜೇಯ ದಾಖಲೆಯನ್ನು ಮುಂದುವರಿಸಿಕೊಂಡು ಹೋದರೆ, ಇದು ಪಾಕಿಸ್ತಾನದ ವಿರುದ್ಧ ಭಾರತದ ಸತತ 12ನೇ ಗೆಲುವಾಗಿಯೂ ದಾಖಲಾಯಿತು.

ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿದು 50 ಓವರ್‌ಗಳಲ್ಲಿ 247 ರನ್ ಗಳಿಸಿತು. ಆರಂಭದಲ್ಲಿ ಭಾರತದ ಬ್ಯಾಟಿಂಗ್ ಅಷ್ಟೊಂದು ಜೋರಾಗಿರಲಿಲ್ಲ. ಯಾವುದೇ ಆಟಗಾರ್ತಿಗೆ ಅರ್ಧಶತಕ ಸಿಗದಿದ್ದರೂ, ಎಲ್ಲರೂ ಸಣ್ಣ ಸಣ್ಣ ಆಟದ ಮೂಲಕ ಒಟ್ಟು ಮೊತ್ತವನ್ನು ದೊಡ್ಡದಾಗಿಸಿದರು. ಹರ್ಲೀನ್ ಡಿಯೋಲ್ 46 ರನ್‌ಗಳೊಂದಿಗೆ ಟಾಪ್ ಸ್ಕೋರರ್ ಆದರೆ, ಜೆಮಿಮಾ ರೊಡ್ರಿಗಸ್ (32), ಪ್ರತೀಕಾ ರಾವಲ್ (31), ದೀಪ್ತಿ ಶರ್ಮಾ (25), ಸ್ಮೃತಿ ಮಂಧಾನ (23) ತಮ್ಮ ಕೊಡುಗೆ ನೀಡಿದರು. ಕೊನೆಯಲ್ಲಿ ರಿಚಾ ಘೋಷ್ ಕೇವಲ 20 ಎಸೆತಗಳಲ್ಲಿ 35 ರನ್‌ಗಳನ್ನು ಸಿಡಿಸಿ ಭಾರತಕ್ಕೆ ಗೌರವಾನ್ವಿತ ಮೊತ್ತ ತಲುಪಿಸಲು ನೆರವಾದರು. ಪಾಕಿಸ್ತಾನ ಪರ ಡಯಾನಾ ಬೇಗ್ ನಾಲ್ಕು ವಿಕೆಟ್‌ಗಳನ್ನು ಕಿತ್ತರೆ, ಸಾದಿಯಾ ಇಕ್ಬಾಲ್ ಮತ್ತು ಫಾತಿಮಾ ಸನಾ ತಲಾ ಎರಡು ವಿಕೆಟ್ ಪಡೆದರು.

247 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ತತ್ತರಿಸಿತು. ಕೇವಲ 26 ರನ್‌ಗಳಿಗೇ ಮೂರು ವಿಕೆಟ್ ಕಳೆದುಕೊಂಡ ಬಳಿಕ ಒತ್ತಡ ಹೆಚ್ಚಾಯಿತು. ಸಿದ್ರಾ ಅಮೀನ್ ಮತ್ತು ನಟಾಲಿಯಾ ಪರ್ವೇಜ್ ನಾಲ್ಕನೇ ವಿಕೆಟ್‌ಗೆ 69 ರನ್‌ಗಳನ್ನು ಸೇರಿಸಿ ಹೋರಾಟ ನಡೆಸಿದರು. ಆದರೆ ನಟಾಲಿಯಾ ಔಟಾದ ಬಳಿಕ ಪಾಕಿಸ್ತಾನದ ಇನ್ನಿಂಗ್ಸ್ ಸಂಪೂರ್ಣ ಕುಸಿಯಿತು. ಸಿದ್ರಾ ಅಮೀನ್ ಮಾತ್ರ ಏಕಾಂಗಿ ಹೋರಾಟ ನೀಡುತ್ತಾ 81 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳಿಂದ ಸಹಕಾರ ಸಿಗದೆ ಇಡೀ ತಂಡ 43ನೇ ಓವರ್‌ನಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಬೌಲರ್‌ಗಳು ಪಾಕಿಸ್ತಾನ ಬ್ಯಾಟರ್‌ಗಳಿಗೆ ಯಾವತ್ತೂ ಅವಕಾಶ ನೀಡಲಿಲ್ಲ. ಕ್ರಾಂತಿ ಗೌಡ್ 10 ಓವರ್‌ಗಳಲ್ಲಿ ಮೂರು ಮೇಡನ್ ಬೌಲಿಂಗ್ ಮಾಡಿ ಕೇವಲ 20 ರನ್‌ಗೆ ಮೂರು ವಿಕೆಟ್ ಪಡೆದರು. ದೀಪ್ತಿ ಶರ್ಮಾ ಕೂಡ ಮೂರು ವಿಕೆಟ್ ಪಡೆದು ಪಾಕಿಸ್ತಾನ ಇನ್ನಿಂಗ್ಸ್ ಮುರಿದರೆ, ಸ್ನೇಹ್ ರಾಣಾ ಎರಡು ವಿಕೆಟ್ ಕಿತ್ತು ಹಾಕಿದರು.

ಈ ಜಯದೊಂದಿಗೆ ಭಾರತ ತಂಡವು ವಿಶ್ವಕಪ್‌ನಲ್ಲಿ ತನ್ನ ಸತತ ಎರಡನೇ ಗೆಲುವು ದಾಖಲಿಸಿತು. ಪಾಕಿಸ್ತಾನ ಪರ ಸಿದ್ರಾ ಅಮೀನ್ ಏಕಾಂಗಿ ಹೋರಾಟ ನೀಡಿದರೂ, ತಂಡದ ಉಳಿದ ಆಟಗಾರ್ತಿಯರಿಂದ ನೆರವು ದೊರೆಯದೇ ಸೋಲನುಭವಿಸಿತು. ಭಾರತದ ಈ ಗೆಲುವು ವಿಶ್ವಕಪ್ ಶೀರ್ಷಿಕೆ ಕನಸು ಸಾಕಾರವಾಗಿಸುವ ದಾರಿಗೆ ಮತ್ತೊಂದು ದೃಢ ಹೆಜ್ಜೆಯಾಗಿದೆ.

error: Content is protected !!