ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿಯಲ್ಲಿ ಗಾಂಜಾ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿರುವ ನಡುವೆ, ಮತ್ತೊಮ್ಮೆ ಪೊಲೀಸರು ಗಾಂಜಾ ಮಾರಾಟದ ದೊಡ್ಡ ರಾಕೆಟ್ ಬಯಲು ಮಾಡಿದ್ದಾರೆ. ಹಲಸೂರು ಗೇಟ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಫುಟ್‌ಪಾತ್‌ನಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿ ಕುಶಾಲ್, ನಗರದ ಕೆ.ಜಿ. ರಸ್ತೆಯ ಬಳಿ 1 ಕೆ.ಜಿ ಗಾಂಜಾವನ್ನು ಮಾರಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ತನಿಖೆಯಲ್ಲಿ ಕುಶಾಲ್ ಇನ್ನೊಬ್ಬರಿಂದ ಗಾಂಜಾ ಪಡೆದು ಮಾರಾಟ ಮಾಡುತ್ತಿದ್ದಾನೆಂಬುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಆತನ ಸಹಚರನ ಮನೆಗೆ ದಾಳಿ ಮಾಡಿದ ಪೊಲೀಸರು ಅಚ್ಚರಿ ಹುಟ್ಟಿಸುವಷ್ಟು 9 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಮನೆಯಲ್ಲಿದ್ದ ಇನ್ನೊಬ್ಬ ಆರೋಪಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.
ಈ ನಡುವೆ, ತಪ್ಪಿಸಿಕೊಂಡ ಆರೋಪಿ ಶೋಧ ಕಾರ್ಯ ಮುಂದುವರಿದಿದ್ದು, ಸದ್ಯ ಕುಶಾಲ್‌ನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಗಾಂಜಾ ಸಂಬಂಧಿತ ಪ್ರಕರಣಗಳು ಕಳೆದ ಕೆಲವು ತಿಂಗಳಿನಿಂದ ಹೆಚ್ಚುತ್ತಲೇ ಇವೆ. ಆಗಸ್ಟ್ ತಿಂಗಳಲ್ಲಿ ಜಾಲಹಳ್ಳಿ ವ್ಯಾಪ್ತಿಯಲ್ಲಿ 41 ಕೆ.ಜಿ ಗಾಂಜಾ ಪತ್ತೆಯಾದ ಪ್ರಕರಣ ನಡೆದಿತ್ತು. ಅಲ್ಲದೇ, ಆನೇಕಲ್ ತಾಲೂಕಿನಲ್ಲಿ ಸಿಕ್ಕಿ 3 ಕೋಟಿ ರೂ. ಮೌಲ್ಯದ 100 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು.