ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ರಾಜಾಜಿನಗರ ಪೊಲೀಸರು ನಿರ್ಮಾಪಕ ಹೇಮಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ರಿಚ್ಚಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ದೂರಿನ ಪ್ರಕಾರ, 2022ರಲ್ಲಿ “ರಿಚ್ಚಿ” ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಹೇಮಂತ್ ಕುಮಾರ್ ಪರಿಚಯ ಮಾಡಿಕೊಂಡಿದ್ದರು. ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ, ಎರಡು ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡು, ಮುಂಗಡವಾಗಿ 60 ಸಾವಿರ ರೂ. ನೀಡಲಾಗಿತ್ತು. ನಂತರ ಶೂಟಿಂಗ್ ವೇಳೆ ಅರೆಬರೆ ಬಟ್ಟೆ ಧರಿಸುವಂತೆ ಒತ್ತಾಯಿಸಿ, ಪ್ರಚಾರದ ನೆಪದಲ್ಲಿ ಖಾಸಗಿ ಹೋಟೆಲಿಗೆ ಒಬ್ಬಳೇ ಬರುವಂತೆ ಕಿರುಕುಳ ನೀಡಿದ್ದರು ಎಂದು ನಟಿ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಬೇಡಿಕೆಗೆ ಒಪ್ಪದಿದ್ದಾಗ ಚಿತ್ರದಲ್ಲಿ ಸೆನ್ಸಾರ್ ಆಗದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವುದಾಗಿ ಬೆದರಿಕೆ ಹಾಕಿದ್ದರು. ನಟಿಯ ತಾಯಿಗೆ ಸಹ ಕೊಲೆ ಬೆದರಿಕೆ ನೀಡಲಾಗಿದೆ ಎಂಬ ದೂರು ದಾಖಲಾಗಿದೆ.
ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಹೇಮಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ.