ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಸರಣಿ ಅಕ್ಟೋಬರ್ 19ರಂದು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳು ನಡೆಯುತ್ತಿದ್ದು, ಮೊದಲಿಗೆ ಮೂರು ಏಕದಿನ ಪಂದ್ಯಗಳು, ನಂತರ ಟಿ20 ಸರಣಿ ಜರುಗಲಿದೆ. ಆಸ್ಟ್ರೇಲಿಯಾ ತಂಡವನ್ನು 15 ಸದಸ್ಯರೊಂದಿಗೆ ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ತಂಡದಲ್ಲಿ ಕೆಲವು ಪ್ರಮುಖ ಆಟಗಾರರು ಸದ್ಯದ ಸರಣಿಯಿಂದ ಹೊರಗುಳಿದಿದ್ದಾರೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಸೊಂಟದ ಮೂಳೆಯ ನೋವಿನ ಕಾರಣದಿಂದ ವಿಶ್ರಾಂತಿ ಪಡೆಯಲು ಸಲಹೆ ಪಡೆದಿದ್ದರಿಂದ ಈ ಸರಣಿಗೆ ಬರುತ್ತಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸದ ವೇಳೆ ಗಾಯಗೊಂಡ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದೇ ಹಂತದಲ್ಲಿ, ಆಸ್ಟ್ರೇಲಿಯಾ ಏಕದಿನ ತಂಡದ ಖಾಯಂ ಸದಸ್ಯ ಮಾರ್ನಸ್ ಲಾಬುಶೇನ್ ಕಳಪೆ ಫಾರ್ಮ್‌ನಿಂದ ಬಳಲಿರುವುದರಿಂದ, ಮೂರು ಏಕದಿನ ಪಂದ್ಯಗಳಿಗೆ ಆಯ್ಕೆ ಮಾಡಲಾಗಿಲ್ಲ.
ಆಸ್ಟ್ರೇಲಿಯಾ ಏಕದಿನ ತಂಡದಲ್ಲಿ ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್ ಮತ್ತು ಆ್ಯಡಂ ಝಂಪಾ ಸೇರಿದ್ದಾರೆ.
ಟಿ20 ಮೊದಲ ಎರಡು ಪಂದ್ಯಗಳಿಗೆ ಆಯ್ಕೆಯಾದ ತಂಡದಲ್ಲಿ ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಆ್ಯಡಂ ಝಂಪಾ ಸೇರಿದ್ದಾರೆ.