Saturday, October 11, 2025

FOOD | ಆರೋಗ್ಯಕರ ಮೂಂಗ್ ದಾಲ್ ಕರಿ ಟ್ರೈ ಮಾಡಿ! ಅನ್ನ ಚಪಾತಿಗೆ ಇದು ಬೆಸ್ಟ್

ಹೆಸರು ಕಾಳು ಪ್ರೋಟೀನ್‌ ಹಾಗೂ ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿದ್ದು, ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಸುಲಭವಾಗಿ ಜೀರ್ಣವಾಗುತ್ತದೆ. ಇದರಿಂದ ತಯಾರಾಗುವ ಮೂಂಗ್ ದಾಲ್ ಕರಿ ನಾಲಿಗೆಗೆ ರುಚಿ ನೀಡುವುದಲ್ಲದೆ ಆರೋಗ್ಯಕ್ಕೂ ಹಿತಕರ. ರೋಟಿ, ಅನ್ನ, ದೋಸೆ ಅಥವಾ ರಾಗಿ ಮುದ್ದೆಯ ಜೊತೆಗೆ ಸೇವಿಸಬಹುದಾದ ಈ ಗ್ರೇವಿ ನಿಮ್ಮ ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿಗಳು:

ಹೆಸರು ಕಾಳು – 1 ಕಪ್
ಟೊಮೇಟೊ – 1
ಈರುಳ್ಳಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಬೆಳ್ಳುಳ್ಳಿ – 1 ಕಾಯಿ
ಹಸಿಮೆಣಸಿನಕಾಯಿ – 3
ಲವಂಗ – 3
ಖಾರದ ಪುಡಿ – 1 ಚಮಚ
ಅರಿಶಿಣ ಪುಡಿ – 1 ಚಮಚ
ಎಣ್ಣೆ – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಹೆಸರು ಕಾಳುಗಳನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿ 2–3 ವಿಷಲ್ ಬರುವವರೆಗೆ ಬೇಯಿಸಿ.

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಲವಂಗವನ್ನು ಹುರಿದು ಸುಗಂಧ ಬರುವಂತೆ ಮಾಡಿ. ಈಗ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿ ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಹುರಿಯಿರಿ. ನಂತರ ಟೊಮೇಟೊ ಹಾಕಿ ಹೊಂಬಣ್ಣ ಬರುವವರೆಗೆ ಬೇಯಿಸಿ.

ಇದಕ್ಕೆ ಬೇಯಿಸಿದ ಹೆಸರು ಕಾಳು ಸೇರಿಸಿ. ನಂತರ ಖಾರದ ಪುಡಿ, ಅರಿಶಿಣ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 3 ಕಪ್ ನೀರನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ಗ್ರೇವಿಯ ಗಟ್ಟಿ ಬರುವವರೆಗೆ ಬೇಯಿಸಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಮೇಲಿಂದ ಹರಡಿ ಬಿಸಿ ಬಿಸಿ ಹೆಸರು ಕಾಳು ಮಸಾಲೆಯನ್ನು ರೊಟ್ಟಿ, ಅನ್ನ ಅಥವಾ ದೋಸೆಯ ಜೊತೆ ಸವಿಯಿರಿ.

error: Content is protected !!