January18, 2026
Sunday, January 18, 2026
spot_img

ಅಭಿಷೇಕ್ ಶರ್ಮಾ ಕಾರ್ ಏನೋ ಗೆದ್ರು.. ಆದ್ರೆ ಭಾರತಕ್ಕೆ ಮಾತ್ರ ತರೋಹಾಗಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ 2025ರಲ್ಲಿ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ ಅದ್ಭುತ ಆಟದ ಮೂಲಕ ಎಲ್ಲರ ಮನ ಗೆದ್ದಿದ್ದರು. 7 ಇನಿಂಗ್ಸ್‌ಗಳಲ್ಲಿ 314 ರನ್‌ಗಳನ್ನು ಕಲೆ ಹಾಕಿದ ಅಭಿಷೇಕ್, ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮಿಂಚಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾದರು. ಈ ಪ್ರಶಸ್ತಿಯ ಭಾಗವಾಗಿ ಅವರಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ಹವಾಲ್ H9 SUV ಕಾರು ನೀಡಲಾಯಿತು. ಆದರೆ ಈ ಐಷಾರಾಮಿ ಕಾರನ್ನು ಭಾರತಕ್ಕೆ ತರಲು ಕಾನೂನಿನ ತಡೆ ಎದುರಾಗಿದೆ.

ಭಾರತದಲ್ಲಿ ಬಲಗೈ ಡ್ರೈವ್ (RHD) ವಾಹನಗಳನ್ನು ಮಾತ್ರ ಓಡಿಸಲು ಅನುಮತಿ ಇದೆ. ಆದರೆ ಅಭಿಷೇಕ್ ಶರ್ಮಾಗೆ ಲಭಿಸಿದ ಹವಾಲ್ H9 SUV ಎಡಗೈ ಡ್ರೈವ್ (LHD) ಮಾದರಿಯದ್ದಾಗಿದ್ದು, ಸ್ಟೀರಿಂಗ್ ಎಡಬದಿಯಲ್ಲಿದೆ. ಹೀಗಾಗಿ ಈ ಕಾರನ್ನು ಭಾರತದಲ್ಲಿ ನೋಂದಣಿ ಮಾಡುವುದು ಹಾಗೂ ರಸ್ತೆಗಳಲ್ಲಿ ಓಡಿಸುವುದು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಈ ಕಾರಣದಿಂದಾಗಿ ಅವರು ಪ್ರಶಸ್ತಿ ಕಾರನ್ನು ಇನ್ನೂ ಭಾರತಕ್ಕೆ ತರಲು ಸಾಧ್ಯವಾಗಿಲ್ಲ.

ಆದರೆ ವರದಿಗಳ ಪ್ರಕಾರ, ಹವಾಲ್ ಕಂಪೆನಿಯ ಮಾಲೀಕತ್ವದ GWM ಸಂಸ್ಥೆ ನವೆಂಬರ್ 2025ರ ವೇಳೆಗೆ ಭಾರತದಲ್ಲಿ ಬಲಗೈ ಡ್ರೈವ್ ಆವೃತ್ತಿಯ SUV ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಆಗ ಅಭಿಷೇಕ್ ಶರ್ಮಾಗೆ ಭಾರತೀಯ ರಸ್ತೆ ನಿಯಮಗಳಿಗೆ ಹೊಂದಿಕೊಳ್ಳುವ ಹೊಸ RHD ಮಾದರಿಯ ಹವಾಲ್ H9 SUV ನೀಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

ಇದರಿಂದ ಅಭಿಷೇಕ್ ಶರ್ಮಾ ಇನ್ನೂ ಕೆಲವು ದಿನಗಳು ಕಾಯಬೇಕಾಗುತ್ತದೆ. ಪ್ರಸ್ತುತ ವಿಶ್ರಾಂತಿ ಪಡೆಯುತ್ತಿರುವ ಅವರು, ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಮರುಪ್ರವೇಶಿಸಲಿದ್ದಾರೆ. ಇದೇ ಅವರ ಮೊದಲ ಆಸ್ಟ್ರೇಲಿಯಾ ಪ್ರವಾಸವಾಗಿದ್ದು, ಅಭಿಮಾನಿಗಳು ಅವರ ಆಟದತ್ತ ಕಣ್ಣು ಹಾಯಿಸಿದ್ದಾರೆ.

Must Read

error: Content is protected !!