ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಅಮಾನತುಗೊಂಡ ವಕೀಲ ರಾಕೇಶ್ ಕಿಶೋರ್, ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ.
71 ವರ್ಷದ ರಾಕೇಶ್ ಕಿಶೋರ್ ಅವರನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಮಾನತುಗೊಳಿಸಿದೆ. ಘಟನೆಯ ನಂತರ ಮಾತನಾಡಿದ ಅವರು, ನಾನು ಕೋಪದಿಂದ ಆ ರೀತಿ ಮಾಡಿದ್ದಲ್ಲ, ನಾನು ಮಾಡಿದ್ದು ಸರಿಯಿದೆ . ಈ ಅಹಿತಕರ ಘಟನೆಗೆ ದೇವರೇ ನನ್ನನ್ನು ಪ್ರಚೋದಿಸಿದ್ದು ಎಂದು ಹೇಳಿದ್ದು, ಈ ಪ್ರಕರಣದ ಸಲುವಾಗಿ ನಾನು ಯಾವುದೇ ಪರಿಣಾಮ ಎದುರಿಸಲು ಸಿದ್ಧನಿದ್ದೇನೆ. ನಾನು ಜೈಲಿಗೆ ಹೋಗುತ್ತೇನೆ. ಅಲ್ಲಿನ ದೇವರ ಹೆಸರಿನಲ್ಲೇ ಎಲ್ಲವನ್ನೂ ಸಹಿಸುತ್ತೇನೆಂದು ಹೇಳಿದ್ದಾರೆ.
ಖಜುರಾಹೊ ಅರ್ಜಿ ವಿಚಾರಣೆ ವೇಳೆ ನ್ಯಾ. ಗವಾಯಿ ಹೇಳಿದ ಅಭಿಪ್ರಾಯದಿಂದ ನನಗೆ ರಾತ್ರಿ ನಿದ್ದೆಯೇ ಬರಲಿಲ್ಲ. ನಂತರ ಮಾರಿಷಸ್‌ನಲ್ಲಿ ಭಾರತೀಯ ಕಾನೂನು ವ್ಯವಸ್ಥೆಯು ಕಾನೂನಿನ ಆಳ್ವಿಕೆಯಿಂದ ನಿಯಂತ್ರಿಸಲ್ಪಡುತ್ತದೆಯೇ ಹೊರತು ಬುಲ್ಡೋಜರ್ ನಿಯಮದಿಂದ ಅಲ್ಲ ಎಂದು ಗವಾಯಿ ಹೇಳಿಕೆಯಿಂದ ನನಗೆ ಅಸಮಾಧಾನವಾಗಿತ್ತು ಎಂದು ಹೇಳಿದರು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಕೀಟಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಕಿಶೋರ್, ವಕೀಲ ವೃತ್ತಿ ಮಾಡುವ ಮೊದಲು ವಿಶ್ವ ಆರೋಗ್ಯ ಸಂಸ್ಥೆಗೆ ಸಲಹೆ ನೀಡಿದ್ದೇನೆ. ಮಾನಸಿಕವಾಗಿಯೂ ನಾನು ಸ್ಥಿಮಿತದಲ್ಲಿದ್ದೇನೆ ಎಂದಿದ್ದಾರೆ.
ನನ್ನ ಕೃತ್ಯದಿಂದ ಕುಟುಂಬದವರು ಅಸಮಾಧಾನಗೊಂಡಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಮುಂದೆ ಯಾವುದೇ ರೀತಿಯ ಪರಿಣಾಮ ಎದುರಿಸಲು ನಾನು ಸಿದ್ಧನಿದ್ದೇನೆ. ದೇವರ ಹೆಸರಿನಲ್ಲೇ ಎಲ್ಲವನ್ನೂ ಸಹಿಸುತ್ತೇನೆ ಎಂದು ಹೇಳಿದ್ದಾರೆ.