Sunday, October 12, 2025

ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟ: ಅಮೆರಿಕ ಪಾಕಿಸ್ತಾನದ ನಡುವೆ ನಡೆದಿದೆ ದೊಡ್ಡ ಒಪ್ಪಂದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಏಷ್ಯಾದ ಭದ್ರತಾ ಸಮೀಕರಣದಲ್ಲಿ ಮಹತ್ವದ ಬೆಳವಣಿಗೆಯಾಗುವಂತೆ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಕ್ಷಿಪಣಿ ರಕ್ಷಣಾ ಒಪ್ಪಂದ ಬಹಿರಂಗವಾಗಿದೆ. ಅಮೆರಿಕದಿಂದ AIM-120 ಅಡ್ವಾನ್ಸ್ಡ್ ಮೀಡಿಯಂ-ರೇಂಜ್ ಏರ್-ಟು-ಏರ್ ಕ್ಷಿಪಣಿಗಳನ್ನು (AMRAAM) ಪಾಕಿಸ್ತಾನ ಪಡೆಯುವ ಸಾಧ್ಯತೆ ಉಂಟಾಗಿದೆ. ಇತ್ತೀಚೆಗೆ ಅಮೆರಿಕ ರಕ್ಷಣಾ ಇಲಾಖೆ ಮಾಡಿಕೊಂಡಿರುವ ಶಸ್ತ್ರಾಸ್ತ್ರ ಒಪ್ಪಂದದಲ್ಲಿ ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳ ಹೆಸರುಗಳಿವೆ.

ಈ ಒಪ್ಪಂದದಲ್ಲಿ ಬ್ರಿಟನ್, ಜರ್ಮನಿ, ಫಿನ್ಲ್ಯಾಂಡ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಇಸ್ರೇಲ್, ಜಪಾನ್, ಇಟಲಿ, ಸಿಂಗಾಪುರ, ಕತಾರ್, ನಾರ್ವೆ, ಸ್ವೀಡನ್, ಕುವೈತ್, ತೈವಾನ್ ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳು ಸೇರಿಕೊಂಡಿದ್ದು, ವಿದೇಶಿ ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರ ಸಭೆಯ ಕೆಲವೇ ದಿನಗಳ ಬಳಿಕ ಈ ಒಪ್ಪಂದ ರೂಪುಗೊಂಡಿರುವುದು ಗಮನಾರ್ಹವಾಗಿದೆ. ಈ ಸಭೆಯ ವೇಳೆ ಟ್ರಂಪ್ ಅವರು ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆ ಮಾಡುವಲ್ಲಿ ಅಮೆರಿಕ ತಾನು ಪಾತ್ರವಹಿಸಿದೆ ಎಂದು ಹೇಳಿದ್ದರು.

ಈ ಒಪ್ಪಂದದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ F-16 ಯುದ್ಧವಿಮಾನ ದಳವನ್ನು ನವೀಕರಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. AIM-120 AMRAAM ಕ್ಷಿಪಣಿಗಳನ್ನು F-16 ಗಳೊಂದಿಗೆ ಬಳಸಲು ಸಾಧ್ಯವಿದ್ದು, 2019ರ ಫೆಬ್ರವರಿಯಲ್ಲಿ ಭಾರತ-ಪಾಕಿಸ್ತಾನ ವೈಮಾನಿಕ ಘರ್ಷಣೆಯ ಸಂದರ್ಭ ಪಾಕಿಸ್ತಾನ ಇದೇ ಕ್ಷಿಪಣಿಯನ್ನು ಭಾರತೀಯ ವಿಮಾನಗಳ ವಿರುದ್ಧ ಬಳಸಿದ ಅನುಭವವಿದೆ.

ರಕ್ಷಣಾ ವಿಶ್ಲೇಷಕರು ಈ ಒಪ್ಪಂದವನ್ನು ಅಮೆರಿಕದ ಕಾರ್ಯತಂತ್ರದ ಒಂದು ಭಾಗವೆಂದು ಪರಿಗಣಿಸುತ್ತಿದ್ದು, ಚೀನಾ ಮತ್ತು ರಷ್ಯಾದ ಪ್ರಭಾವವನ್ನು ಸಮತೋಲನಗೊಳಿಸುವ ಪ್ರಯತ್ನ ಇದಾಗಬಹುದು ಎಂದು ಅಂದಾಜಿಸಿದ್ದಾರೆ. ಭಾರತ ಈಗಾಗಲೇ ಸುಧಾರಿತ ರಫೇಲ್ ಹಾಗೂ ಸುಖೋಯ್-30MKI ಯುದ್ಧವಿಮಾನಗಳನ್ನು ಹೊಂದಿದ್ದು, ಅವು ಮೆಟಿಯೋರ್ ಕ್ಷಿಪಣಿಗಳನ್ನು ಬಳಸುತ್ತಿವೆ.

ಒಟ್ಟಾರೆ, ಈ ಒಪ್ಪಂದವು ಪಾಕಿಸ್ತಾನದ ವಾಯುಶಕ್ತಿಯನ್ನು ವೃದ್ಧಿಸುವುದರೊಂದಿಗೆ, ದಕ್ಷಿಣ ಏಷ್ಯಾದ ರಕ್ಷಣಾ ಸಮತೋಲನದ ಮೇಲೆ ಮಹತ್ತರ ಪರಿಣಾಮ ಬೀರಲಿದೆ.

error: Content is protected !!