ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ರಾಜಕೀಯ ನಿರ್ಧಾರಗಳು ಬೇರೆ ದೇಶದ ಒತ್ತಡದಿಂದ ಪ್ರಭಾವಿತವಾಗಿವೆ. ಅದೇ ಕಾರಣಕ್ಕೆ ಮುಂಬೈ ದಾಳಿಗೆ ಆಗಿನ ಸರ್ಕಾರ ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನೇತೃತ್ವದ ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವಿ ಮುಂಬೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಂಬೈ ಆರ್ಥಿಕ ರಾಜಧಾನಿ ನಗರ ಮಾತ್ರವಲ್ಲ, ಭಾರತದ ಅತ್ಯಂತ ಚೈತನ್ಯಶೀಲ ನಗರಗಳಲ್ಲಿ ಒಂದಾಗಿದೆ. 2008ರಲ್ಲಿ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಲು ಇದೇ ಕಾರಣ. ಆದರೆ ಅಂದಿನ ಕಾಂಗ್ರೆಸ್ ಸರ್ಕಾರ ದೌರ್ಬಲ್ಯದ ಸಂದೇಶವನ್ನು ನೀಡಿತು ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಗೃಹ ಸಚಿವರೊಬ್ಬರು ಇದನ್ನು ಒಪ್ಪಿಕೊಂಡಿದ್ದಾರೆ. ಮುಂಬೈ ದಾಳಿಯ ನಂತರ ನಮ್ಮ ಭದ್ರತಾ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದವು, ಆದರೆ ಬೇರೆ ದೇಶದ ಒತ್ತಡದಿಂದಾಗಿ ಆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ನಮ್ಮ ಭದ್ರತಾ ಪಡೆಗಳನ್ನು ತಡೆದು ನಿಲ್ಲಿಸಬೇಕಾಯಿತು ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರೇ ಹೇಳಿದ್ದಂತೆ ಯಾವ ದೇಶದ ಒತ್ತಡದಿಂದ ಅಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆಯೋ ಆ ದೇಶದ ಹೆಸರನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು. ಯುಪಿಎ ಸರ್ಕಾರದ ಆ ನಿರ್ಧಾರದಿಂದಾಗಿ ಭಾರತವು ಬಹಳಷ್ಟು ತೊಂದರೆ ಅನುಭವಿಸಬೇಕಾಯಿತು. ವಿದೇಶಿ ಒತ್ತಡದಿಂದ ಕಾಂಗ್ರೆಸ್ ಸರ್ಕಾರ ಸೇನೆಯನ್ನು ತಡೆದಿದ್ದು ಭಯೋತ್ಪಾದಕರನ್ನು ಬಲಪಡಿಸಿ, ಅವರಿಗೆ ಕಾವಲಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.