ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾರಂಟಿಗಳ ಮೂಲಕ ಈಗಾಗಲೇ ರಾಜ್ಯದ ಹೆಣ್ಣುಮಕ್ಕಳ ಹೃದಯ ಗೆದ್ದಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಇನ್ನೊಂದು ಮಹತ್ವದ ನಿರ್ಧಾರದ ಮೂಲಕ ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಬಲ ತುಂಬಿದೆ. ಋತುಚಕ್ರದ ನೋವಿನ ದಿನಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡುವ ಮಹತ್ವದ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಇದು ಕೇವಲ ರಜೆಯಲ್ಲ, ಬದಲಿಗೆ ಹೆಣ್ಣುಮಕ್ಕಳ ಸ್ವಾಸ್ಥ್ಯ ಮತ್ತು ಸ್ವಾಭಿಮಾನಕ್ಕೆ ಸರ್ಕಾರ ನೀಡಿದ ಬೆಂಬಲ. ‘ಋತುಚಕ್ರ ರಜೆ ನೀತಿ 2025’ ಗೆ ಕ್ಯಾಬಿನೆಟ್ ಸಮ್ಮತಿ ದೊರೆತಿದ್ದು, ಈ ನಿರ್ಧಾರ ರಾಜ್ಯದ ಲಕ್ಷಾಂತರ ಉದ್ಯೋಗಸ್ಥ ಮಹಿಳೆಯರ ಪಾಲಿಗೆ ವರದಾನವಾಗಿದೆ.
ಯಾರಿಗೆಲ್ಲಾ ಈ ಸೌಲಭ್ಯ? ಹೇಗೆ ಸಿಗಲಿದೆ?
ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, MNC, ಐಟಿ ವಲಯಗಳು ಮತ್ತು ಇತರ ಎಲ್ಲ ಖಾಸಗಿ ಕೈಗಾರಿಕೆಗಳಲ್ಲಿ ದುಡಿಯುವ ಮಹಿಳೆಯರಿಗೆ ಈ ಸೌಲಭ್ಯ ಅನ್ವಯವಾಗುತ್ತದೆ.
- ಒಟ್ಟು 12 ದಿನಗಳು: ಮಹಿಳೆಯರು ವರ್ಷಕ್ಕೆ ಒಟ್ಟು 12 ದಿನಗಳ ವೇತನ ಸಹಿತ ರಜೆ ಪಡೆಯಬಹುದು.
- ನಿಮ್ಮದೇ ನಿರ್ಧಾರ: ಪ್ರತಿ ತಿಂಗಳು ಋತುಚಕ್ರದ ಸಮಯದಲ್ಲಿ, ತಮಗೆ ಯಾವಾಗ ಹೆಚ್ಚು ಕಷ್ಟವಾಗುತ್ತದೆಯೋ ಆ ಒಂದು ದಿನದ ರಜೆಯನ್ನು ಪಡೆಯುವ ಸಂಪೂರ್ಣ ಅಧಿಕಾರವನ್ನು ಮಹಿಳೆಯರಿಗೆ ನೀಡಲಾಗಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್ ಅವರು, “ಮಹಿಳೆಯರ ಕಲ್ಯಾಣವೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಋತುಚಕ್ರದ ರಜೆಗೆ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ. ಆದಷ್ಟು ಬೇಗ ಈ ಬಿಲ್ ಅನ್ನು ಜಾರಿಗೊಳಿಸಿ, ಅದ್ದೂರಿ ಕಾರ್ಯಕ್ರಮದ ಮೂಲಕ ಈ ಐತಿಹಾಸಿಕ ನಿರ್ಧಾರವನ್ನು ಅನುಷ್ಠಾನಕ್ಕೆ ತರುತ್ತೇವೆ” ಎಂದು ಘೋಷಿಸಿದರು.
ಈ ಹೊಸ ನೀತಿಯು ರಾಜ್ಯದ ದುಡಿಯುವ ಮಹಿಳೆಯರ ಆರೋಗ್ಯ, ಸೌಕರ್ಯ ಮತ್ತು ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ಒಂದು ದಿಟ್ಟ ಹಾಗೂ ಪ್ರಗತಿಪರ ಹೆಜ್ಜೆಯಾಗಿದೆ.