ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ 125 ಗಿಗಾವ್ಯಾಟ್ ಗಡಿ ತಲುಪಿದ್ದು, ದೇಶ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ಸೌರ ಒಕ್ಕೂಟದ ಸಭೆಯ 8ನೇ ಅಧಿವೇಶನವನ್ನು ಉದ್ಘಾಟಿಸಿದ ಸಚಿವರು, 2030ರ ವೇಳೆಗೆ ವಿಶ್ವದ ನವೀಕರಿಸಬಹುದಾದ ಇಂಧನವನ್ನು 11 ಸಾವಿರ ಗಿಗಾವ್ಯಾಟ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದನ್ನು ಸಾಧಿಸಲು ಸೌರಶಕ್ತಿ , ಏಕೈಕ ಪ್ರಮುಖ ಕೀಲಿಯಾಗಿದೆ ಎಂದು ತಿಳಿಸಿದರು.
ಸೌರಶಕ್ತಿ ಕ್ಷೇತ್ರದ ಉನ್ನತಿಗೆ ಭಾರತ ಮತ್ತು ಫ್ರಾನ್ಸ್ ಹಂಚಿಕೊಂಡ ದೃಷ್ಟಿಕೋನದ ಭಾಗವಾಗಿ ಅಂತರರಾಷ್ಟ್ರೀಯ ಸೌರ ಒಕ್ಕೂಟ, ಇಂದು ಪ್ರಬಲ ಜಾಗತಿಕ ವೇದಿಕೆಯಾಗಿ ಮಾರ್ಪಟ್ಟಿದೆ. ಅದರ ಸದಸ್ಯತ್ವ 124 ದೇಶಗಳಿಗೆ ಹೆಚ್ಚಾಗಿದೆ ಎಂದು ಹೇಳಿದರು.
ಸೌರಶಕ್ತಿ ಪರಿಹಾರಗಳನ್ನು ಕಾರ್ಯಗತಗೊಳಿಸುವ ಮೂಲಕ, ಹವಾಮಾನ ಬದಲಾವಣೆಯನ್ನು ಎದುರಿಸಲು ಪ್ರಯತ್ನಗಳನ್ನು ಒಗ್ಗೂಡಿಸುವ ಗುರಿಯನ್ನು ಈ ಒಕ್ಕೂಟ ಹೊಂದಿದೆ. 2030 ರ ವೇಳೆಗೆ ಸೌರ ಹೂಡಿಕೆಗಳಲ್ಲಿ ಒಂದು ಟ್ರಿಲಿಯನ್ ಡಾಲರ್‌ಗಳನ್ನು ತಲುಪುವುದು ಇದರ ಉದ್ದೇಶವಾಗಿದೆ ಎಂದರು.
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯೊಂದಿಗೆ, 20 ಲಕ್ಷಕ್ಕೂ ಹೆಚ್ಚು ಮನೆಗಳು ಈಗಾಗಲೇ ತಮ್ಮ ಮೇಲ್ಚಾವಣಿಗಳಲ್ಲಿ ಸೌರಶಕ್ತಿಯಿಂದ ಪ್ರಯೋಜನ ಪಡೆಯುತ್ತಿವೆ. ಇದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
125 ಗಿ.ವ್ಯಾ. ಗಡಿ ತಲುಪಿದ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ: ಭಾರತವೀಗ ವಿಶ್ವದ 3ನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರ!
