January19, 2026
Monday, January 19, 2026
spot_img

ವಿಶ್ವದ ಪ್ರತಿ 100 ಡಿಜಿಟಲ್‌ ವ್ಯವಹಾರದಲ್ಲಿ 50 ಭಾರತದಿಂದ: ಫಿನ್‌ಟೆಕ್ ಸಭೆಯಲ್ಲಿ ತಂತ್ರಜ್ಞಾನದ ವಿರಾಟ್ ರೂಪ ಬಿಚ್ಚಿಟ್ಟ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಇಂದು ತಂತ್ರಜ್ಞಾನದಲ್ಲಿ ಅತಿ ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಂಬೈನಲ್ಲಿಂದು ಹೇಳಿದ್ದಾರೆ.

ಜಾಗತಿಕ ಫಿನ್‌ಟೆಕ್‌ ಸಭೆಯನ್ನು ಉದ್ದೇಶಿಸಿ ಪ್ರಧಾನಿ, ಭಾರತದಲ್ಲಿ ಪ್ರತಿತಿಂಗಳೂ 20 ಬಿಲಿಯನ್‌ ವಹಿವಾಟುಗಳು ಯುಪಿಐ ಮೂಲಕ ಆಗುತ್ತಿದೆ. ವಿಶ್ವದ ಪ್ರತಿ 100 ಡಿಜಿಟಲ್‌ ವ್ಯವಹಾರದಲ್ಲಿ 50 ಭಾರತದಿಂದಲೇ ಆಗುತ್ತಿದೆ. ಇದು ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಭಾರತವು ಪ್ರಜಾಪ್ರಭುತ್ವದ ತಾಯಿ. ಈ ಪ್ರಜಾಪ್ರಭುತ್ವವನ್ನು ಆಡಳಿತದ ಬಲವಾದ ಸ್ತಂಭವನ್ನಾಗಿ ಮಾಡಲಾಗಿದೆ. ತಂತ್ರಜ್ಞಾನವನ್ನೂ ಪ್ರಜಾಪ್ರಭುತ್ವೀಕರಣಗೊಳಿಸುವ ಮೂಲಕ, ಅದನ್ನು ಸಮಾನತೆಯ ಸಾಧನವನ್ನಾಗಿಸಲಾಗಿದೆ ಎಂದು ಹೇಳಿದರು. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡ ತಂತ್ರಜ್ಞಾನವು ಪರಿವರ್ತಿಸಿದೆ. ಇದಕ್ಕೆ ಶ್ರೇಯಸ್ಸು ಜನ್ ಧನ್, ಆಧಾರ್ ಮತ್ತು ಮೊಬೈಲ್ ಗಳಿಗೆ ಸಲ್ಲುತ್ತದೆ ಎಂದು ಪ್ರಧಾನಿ ಹೇಳಿದರು.

ಸ್ಟಾರ್ಟ್ ಅಪ್‌ ಕ್ಷೇತ್ರದಲ್ಲಿಯೂ ಭಾರತ ಮುಂಚೂಣಿಯಲ್ಲಿದೆ ಎಂದ ಪ್ರಧಾನಿ, ಭಾರತದಲ್ಲಿ ಸ್ಟಾರ್ಟ್‌ ಅಪ್‌ ಆರಂಭಿಸಲು ವಿವಿಧ ದೇಶಗಳ ಯುವ ಸಮುದಾಯವನ್ನು ಆಹ್ವಾನಿಸಿದರು. ಇದಕ್ಕೂ ಮುನ್ನ ನಡೆದ ಬ್ರಿಟನ್‌ ಪ್ರಧಾನಿ ಸ್ಟಾರ್ಮರ್ ನೇತೃತ್ವದ CEO ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಭಾರತ ಮತ್ತು ಬ್ರಿಟನ್‌ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧವು 56 ಬಿಲಿಯನ್‌ ಡಾಲರ್‌ಗಳಷ್ಟಿದ್ದು, 2030ರ ವೇಳೆಗೆ ಅದು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಈ ಗುರಿಯು ಸಮಯಕ್ಕಿಂತ ಮುಂಚೆಯೇ ಸಾಧಿಸುವ ಭರವಸೆ ಇದೆ ಎಂದು ಹೇಳಿದರು.

ಜಾಗತಿಕ ಅಸ್ಥಿರತೆಯ ನಡುವೆಯೂ ಎರಡೂ ದೇಶಗಳ ನಡುವಿನ ಸಂಬಂಧ ಅಭೂತಪೂರ್ವವಾಗಿ ಮುಂದುವರೆದಿದೆ. ವಿಶ್ವದ ಎರಡು ಅತಿ ದೊಡ್ಡ ಅರ್ಥವ್ಯವಸ್ಥೆ ದೇಶಗಳಿಗೆ ದ್ವಿಪಕ್ಷೀಯ ಮಾತುಕತೆಯ ಹೊಸ ಆಯಾಮವನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬ್ರಿಟನ್‌ ಜೊತೆಗಿನ ಮಾತುಕತೆಯ ಮೂಲಕ MSME ಗಳಿಗೆ ಬಲ ದೊರಕಿದೆ. ಲಕ್ಷಾಂತರ ಯುವಕರಿಗೆ ಉದ್ಯೋಗದ ಬಾಗಿಲು ತೆರೆದಿದೆ ಎಂದರು. 2030ರ ವೇಳೆಗೆ ಭಾರತವು 500 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನದ ಗುರಿಯನ್ನು ಹೊಂದಲಾಗಿದ್ದು, ಬ್ರಿಟನ್‌ ನೆರವಿನಿಂದ ಇದು ಸಾಧ್ಯವಾಗಲಿದೆ ಎಂದರು.

Must Read