ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಯಲಹಂಕದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಯುವಕ ಮತ್ತು ಯುವತಿ ಸಜೀವ ದಹನವಾಗಿರುವಂತಹ ಘಟನೆ ನಡೆದಿದೆ.
ಗದಗ ಮೂಲದ ಯುವಕ (ಹೆಸರು ಪತ್ತೆ ಆಗಿಲ್ಲ) ಮತ್ತು ಹುನಗುಂದ ಮೂಲದ ಕಾವೇರಿ ಬಡಿಗೇರ್ ಮೃತರು. ಸದ್ಯ ಇಬ್ಬರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಬಿಲ್ಡಿಂಗ್ನಲ್ಲಿದ್ದ ಲಾಡ್ಜ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಯುವಕ ಮತ್ತು ಯುವತಿ ಲಾಡ್ಜ್ನ ಒಂದೇ ರೂಮಿನಲ್ಲಿದ್ದರು. ಲಾಡ್ಜ್ನ ಬಾತ್ರೂಂ ಒಳಗಡೆ ಯುವತಿ ಇದ್ದು, ಬಾಗಿಲು ಹಾಕಲಾಗಿತ್ತು. ಹೊಗೆ ಬಂದ ತಕ್ಷಣ ಯುವತಿಯೇ ಲಾಡ್ಜ್ನವರಿಗೆ ಕರೆ ಮಾಡಿದ್ದಳು. ರೂಂ ಕೂಡ ಲಾಕ್ ಆಗಿತ್ತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬಂದು ಬಾಗಿಲು ಹೊಡೆದು ಒಳಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಮೃತಪಟ್ಟಿದ್ದರು.
ಮೃತ ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರೆಸ್ಟೋರೆಂಟ್ ಸಮೀಪದ ಬಿಲ್ಡಿಂಗ್ ಸ್ಫಾನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ರೆಸ್ಟೋರೆಂಟ್ನ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿ ಮತ್ತು ಗ್ರಾಹಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ರಕ್ಷಣೆ ಕಾರ್ಯ ಮಾಡಲಾಗುತ್ತಿದೆ.
ಈ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಹೇಳಿಕೆ ನೀಡಿದ್ದು, ಯಲಹಂಕದ ಕಿಚನ್ 6 ರೆಸ್ಟೋರೆಂಟ್ನಲ್ಲಿ ಅವಘಡ ಸಂಭವಿಸಿದೆ. ಲಾಡ್ಜ್ನ 3ನೇ ಮಹಡಿಯ ರೂಮ್ನಲ್ಲಿದ್ದ ಯುವಕ-ಯುವತಿ ಮೃತಪಟ್ಟಿದ್ದಾರೆ. ಆತ್ಮಹತ್ಯೆನಾ ಅಥವಾ ಏನು ಎಂದು ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.