ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಬ್ರಿಟನ್ನ ಅತ್ಯಾಧುನಿಕ ಮಾರ್ಟ್ಲೆಟ್ ಕ್ಷಿಪಣಿಗಳನ್ನು ಪಡೆಯಲು 350 ಮಿಲಿಯನ್ ಪೌಂಡ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ರಕ್ಷಣಾ ಕ್ಷೇತ್ರಕ್ಕೆ ಮತ್ತಷ್ಟು ಬಲ ಸಿಗುತ್ತದೆ.
ಇತ್ತೀಚೆಗಷ್ಟೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಎರಡೂ ದೇಶಗಳು ಪರಸ್ಪರ ರಕ್ಷಣಾ ಕ್ಷೇತ್ರದಲ್ಲಿ ಕೊಡುಕೊಳ್ಳುವಿಕೆ ಹೆಚ್ಚಿಸುತ್ತಿವೆ. ಬ್ರಿಟನ್ ದೇಶದ ಆರ್ಥಿಕತೆಗೂ ಈ ಡೀಲ್ ಪುಷ್ಟಿ ಕೊಡಲಿದೆ.
ಉತ್ತರ ಐರ್ಲೆಂಡ್ನಲ್ಲಿ ಈ ಕ್ಷಿಪಣಿ ತಯಾರಾಗಲಿದೆ. ಅಲ್ಲಿ 700ಕ್ಕೂ ಅಧಿಕ ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ಯುಕೆ ರಾಷ್ಟ್ರದ ಮಾರ್ಟ್ಲೆಟ್ಗಳು ಹಗುರ ತೂಕದ ಮಲ್ಟಿರೋಲ್ ಕ್ಷಿಪಣಿಗಳಾಗಿವೆ. ಮೇಲಿನಿಂದ ನೆಲಕ್ಕೆ ಬಡಿಯಬಲ್ಲುದು; ನೆಲದಿಂದ ಆಕಾಶದಲ್ಲಿರುವ ಗುರಿಗೆ ಹೊಡೆಯಬಲ್ಲುದು; ನೆಲದಿಂದ ನೆಲಕ್ಕೆ ಹೊಡೆಯಬಲ್ಲುದು ಹೀಗೆ ಸರ್ವವಿಧದ ಗುರಿಗಳ ನಾಶಕ್ಕೆ ಈ ಕ್ಷಿಪಣಿಗಳು ತಕ್ಕುದಾಗಿವೆ.
ಇಂಗ್ಲೀಷ್ ನಾಡಿನ ಪುರಾಣದಲ್ಲಿ ಬರುವ ಮಾರ್ಟ್ಲೆಟ್ ಎನ್ನುವ ಕಾಲ್ಪನಿಕ ಹಕ್ಕಿಯ ಹೆಸರನ್ನು ಈ ಕ್ಷಿಪಣಿಗೆ ಇಡಲಾಗಿದೆ. ದಂತಕಥೆಯ ಪ್ರಕಾರ ಈ ಹಕ್ಕಿ ಎಂದಿಗೂ ವಿರಮಿಸುವುದಿಲ್ಲ.
ಬ್ರಿಟನ್ ಸೇನೆಯ ಬತ್ತಳಿಕೆಯಲ್ಲಿರುವ ಪ್ರಧಾನ ಅಸ್ತ್ರಗಳಲ್ಲಿ ಮಾರ್ಟ್ಲೆಟ್ ಒಂದು. ಪ್ರಸಕ್ತ ಉಕ್ರೇನ್ ದೇಶಕ್ಕೆ ಈ ಕ್ಷಿಪಣಿಗಳನ್ನು ಬ್ರಿಟನ್ ನೀಡಿದೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಈ ಮಿಸೈಲ್ಗಳನ್ನು ಬಳಸುತ್ತಿದೆ.
ನಾರ್ತರ್ನ್ ಐರ್ಲೆಂಡ್ನ ಬೆಲ್ಫಾಸ್ಟ್ನಲ್ಲಿ ಮಾರ್ಟ್ಲೆಟ್ ಕ್ಷಿಪಣಿಗಳು ಮತ್ತು ಲಾಂಚರ್ಗಳನ್ನು ತಯಾರಿಸಲಾಗುತ್ತಿದೆ. ಭಾರತಕ್ಕೂ ಕೂಡ ಉಕ್ರೇನ್ನಷ್ಟೇ ಪ್ರಮಾಣದಲ್ಲಿ ಕ್ಷಿಪಣಿಗಳನ್ನು ಬ್ರಿಟನ್ ನಿರ್ಮಿಸಿ ಕೊಡಲಿದೆ. ಮಂದಗೊಂಡಿರುವ ಯುಕೆ ಆರ್ಥಿಕತೆಗೆ ಈ ಯೋಜನೆಗಳು ಪುಷ್ಟಿ ಕೊಡುವ ನಿರೀಕ್ಷೆ ಇದೆ.