Sunday, October 12, 2025

ಪಾಕ್‌ ಏರ್‌ಸ್ಟ್ರೈಕ್‌: ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್‌ ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುರುವಾರ ರಾತ್ರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಗರದ ಮೇಲೆ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಬಳಸಿ ವಾಯು ದಾಳಿ ನಡೆಸಿದೆ.

ಕಾಬೂಲ್ ನಗರದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಯಾರೂ ಭಯಪಡುವ ಅಗತ್ಯವಿಲ್ಲ.ಘಟನೆಯ ತನಿಖೆ ನಡೆಯುತ್ತಿದೆ, ಇಲ್ಲಿಯವರೆಗೆ ಯಾವುದೇ ಹಾನಿಯ ವರದಿ ಬಂದಿಲ್ಲ ಎಂದು ಅಫ್ಘಾನ್-ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ವರದಿಗಳ ಪ್ರಕಾರ ಕಾಬೂಲ್‌ನ ಪೂರ್ವ ಭಾಗದಲ್ಲಿರುವ ತಾಲಿಬಾನ್‌ ಸರ್ಕಾರದ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ.

ದೇಶದ ಒಳಗಡೆ ನಡೆಯುತ್ತಿರುವ ಭಯೋತ್ಪಾದಕ ದಾಳಿಗೆ ತಾಲಿಬಾನ್‌ನಲ್ಲಿರುವ ತೆಹ್ರೀಕ್-ಇ-ತಾಲಿಬಾನ್ಉಗ್ರರೇ ಕಾರಣ ಎಂದು ಪಾಕಿಸ್ತಾನ ದೂರಿದೆ. ಈ ಉಗ್ರರಿಗೆ ಅಫ್ಘಾನಿಸ್ತಾನ ಬೆಂಬಲ ನೀಡುತ್ತಿರುವುದಕ್ಕೆ ತಾಲಿಬಾನ್‌ ಸರ್ಕಾರದ ವಿರುದ್ಧ ಪಾಕ್‌ ಸಿಟ್ಟಾಗಿದೆ.

ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಭಾರತಕ್ಕೆ ಭೇಟಿ ನೀಡುತ್ತಿರುವ ಸಮಯದಲ್ಲಿ ಮತ್ತು ಇಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಸಲು ಸಿದ್ಧರಾಗಿರುವ ಸಮಯದಲ್ಲಿ ಕಾಬೂಲ್‌ನಲ್ಲಿ ಪಾಕಿಸ್ತಾನ ದಾಳಿ ನಡೆಸಿರುವುದು ಮಹತ್ವ ಪಡೆದಿದೆ.

ಕಾಬೂಲ್‌ ಮೇಲೆ ಏರ್‌ಸ್ಟ್ರೈಕ್‌ ನಡೆದ ಬೆನ್ನಲ್ಲೇ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ ಮತ್ತು ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯಲ್ಲಿ ಮುಂದಿನ ಆದೇಶ ಜಾರಿಯಾಗುವವರೆಗೂ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

error: Content is protected !!