Saturday, October 11, 2025

ಇದೆಂತ ಸ್ವಾಮಿ! ರಸ್ತೆನಾ, ಕಂಬಳದ ಗದ್ದೆನಾ?: ಕೆಸರಲ್ಲೇ ಹೂತು ಹೋಗ್ತಿದೆ ವಾಹನ, ಹೋಗೋದಾದ್ರೂ ಹೇಗೆ?

ಹೊಸದಿಗಂತ ವರದಿ ಮಡಿಕೇರಿ:

ಇದು ಕೆಸರು ಗದ್ದೆಯಲ್ಲ; ಹಾಸನ-ಮಾಕುಟ್ಟ ರಾಜ್ಯ ಹೆದ್ದಾರಿಯ ಸಿದ್ದಾಪುರ-ವೀರಾಜಪೇಟೆ ರಸ್ತೆ!
ಸಿದ್ದಾಪುರ ವ್ಯಾಪ್ತಿಯಲ್ಲಿ ಈ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಗುರುವಾರ ರಾತ್ರಿ ಈ ಭಾಗದಲ್ಲಿ ಮಳೆಯಾಗಿರುವುದರಿಂದ ಮತ್ತು ರಾತ್ರಿಯೂ ರಸ್ತೆ ಕಾಮಗಾರಿ ನಡೆಸಿದ್ದರಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.

ಪರಿಣಾಮವಾಗಿ ಶುಕ್ರವಾರ ಬೆಳಗ್ಗೆಯಿಂದ ಈ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ವೀರಾಜಪೇಟೆ ರಸ್ತೆಯಲ್ಲಿ ವಾಹನಗಳು ಹೂತುಹೋಗುತ್ತಿರುವುದರಿಂದ ಸಂಚಾರ ಕಷ್ಟಕರವಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ದ್ವಿಚಕ್ರ ವಾಹನ ಚಾಲಕರು ಕೆಸರಿನಲ್ಲಿ ಬಿದ್ದು ಮುಂದೆ ಸಾಗಿದರೆ, ಕೆಲವು ಶಾಲಾ ಮಕ್ಕಳು ಸಹ ಕೆಸರಿನಲ್ಲಿ ಬಿದ್ದು ಗಂಟೆಗಳ ಬಳಿಕ ಶಾಲೆ ತಲುಪಿದ್ದಾರೆ. ಕೆಸರಿನಲ್ಲಿ ಸಿಲುಕಿದ ಬಸ್’ಗಳನ್ನು ಎಳೆಯಲು ಜೆಸಿಬಿ ಯಂತ್ರವನ್ನೇ ತರಬೇಕಾಯಿತು.

ವೀರಾಜಪೇಟೆ- ಸಿದ್ದಾಪುರ ರಸ್ತೆ ಕಾಮಗಾರಿ ಮಳೆಗಾಲಕ್ಕೆ ಮುನ್ನವೇ ಆರಂಭವಾಗಿದ್ದು, ಪ್ರಾರಂಭದಿಂದಲೂ ಕುಂಟುತ್ತಾ ಸಾಗಿದೆ. ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಇತ್ತೀಚೆಗೆ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಪರಿಣಾಮವಾಗಿ ಇದೀಗ ಕೆಲಸ ಚುರುಕುಗೊಂಡಿದ್ದರೂ, ಮಳೆಯಿಂದಾಗಿ ಇಡೀ ರಸ್ತೆ ಕೆಸರುಮಯವಾಗಿದ್ದು, ರಸ್ತೆಯ ಕೆಸರು ಸರಿಯಾಗದಿದ್ದರೆ ಈ ರಸ್ತೆಯಲ್ಲಿ ಸಂಚಾರ ಸುಲಭವಲ್ಲ!

error: Content is protected !!