Wednesday, September 10, 2025

ಪಹಲ್ಗಾಮ್ ದಾಳಿ ದೇಶದಲ್ಲೇ ಬೆಳೆದ ಉಗ್ರರಿಂದ ಆಗಿರಬಹುದು: ಕೋಲಾಹಲ ಎಬ್ಬಿಸಿದ ʻಕೈʼ ನಾಯಕ ಚಿದಂಬರಂ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ದಾಳಿಯನ್ನು ದೇಶದಲ್ಲೇ ಬೆಳೆದ ಉಗ್ರರು ನಡೆಸಿರಬಹುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ನೀಡಿದ್ದ ಹೇಳಿಕೆ ಕೋಲಾಹಲ ಎಬ್ಬಿಸಿದೆ.

ಚಿದಂಬರಂ ಪಾಕಿಸ್ತಾನಕ್ಕೆ ಕ್ಲೀನ್‌ ಚಿಟ್‌ ಕೊಟ್ರಾ ಅನ್ನೋ ಪ್ರಶ್ನೆಯೂ ಎದಿದ್ದು, ಎನ್‌ಡಿಎ ನಾಯಕರು ತೀವ್ರ ವಾಗ್ದಾಳಿ ನಡೆದಿದ್ದಾರೆ.

ಪಹಲ್ಗಾಮ್ ದಾಳಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕಾಂಗ್ರೆಸ್‌ ಹಿರಿಯ ನಾಯಕ, ಕಳೆದ ಕೆಲವು ವಾರಗಳಲ್ಲಿ ಎನ್‌ಐಎ ತನಿಖೆ ಮಾಡಿದೆ ಎಂಬುದನ್ನ ಹೇಳಲು ಸರ್ಕಾರ ಸಿದ್ಧವಿಲ್ಲ. ಅವರು ಭಯೋತ್ಪಾದಕರನ್ನ ಗುರುತಿಸಿದ್ದಾರೆಯೇ? ಅವರು ಎಲ್ಲಿಂದ ಬಂದ್ರು ಅಂತ ಯಾರಿಗೆ ಗೊತ್ತು? ಅವರು ದೇಶದೊಳಗೇ ತರಬೇತಿ ಪಡೆದ, ಮನೆಯಲ್ಲಿ ಬೆಳೆದ ಭಯೋತ್ಪಾದಕರಾಗಿರಬಹುದು. ಪಾಕಿಸ್ತಾನದಿಂದಲೇ ಬಂದವರೆಂದು ಏಕೆ ಭಾವಿಸಿದ್ದೀರಿ? ಅಂತ ಪ್ರಶ್ನೆ ಮಾಡಿದ್ದರು.

ಭಯೋತ್ಪಾದಕರು ಪಾಕಿಸ್ತಾನದಿಂದಲೇ ಬಂದವರೆಂದು ಹೇಳೋದಕ್ಕೆ ಯಾವುದೇ ಪುರಾವೆಗಳಿಲ್ಲ. ಭಾರತ ಅನುಭವಿಸಿದ ನಷ್ಟವನ್ನು ಸರ್ಕಾರ ಕೂಡ ಮರೆಮಾಡುತ್ತಿದೆ. ಇಷ್ಟೆಲ್ಲ ಆದ್ರೂ ಸರ್ಕಾರ ದೇಶವನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಆಪರೇಷನ್‌ ಸಿಂದೂರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಕೊನೆಗೊಳಿಸಿಲ್ಲ ಅಂತ ಪ್ರಧಾನಿ ಹೇಳಿದ್ದಾರೆ. ಹಾಗಿದ್ದರೇ ಕದನ ವಿರಾಮದ ಬಳಿಕ ಕೇಂದ್ರ ಏನು ಕ್ರಮ ತೆಗೆದುಕೊಂಡಿದೆ. ಪಹಲ್ಗಾಮ್‌ನಂತೆ ಮತ್ತೊಂದು ದಾಳಿಯಾದ್ರೆ ತಡೆಯಲು ಮೋದಿ ಸರ್ಕಾರ ಏನು ಕ್ರಮ ಕೈಗೊಂಡಿದೆಯೇ? ದಾಳಿ ಮಾಡಿದ ಉಗ್ರರು ಎಲ್ಲಿದ್ದಾರೆ? ಉಗ್ರರಿಗೆ ಆಶ್ರಯ ನೀಡಿದ್ದ ಕೆಲವರನ್ನ ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು, ಅವರಿಗೆ ಏನು ಶಿಕ್ಷೆ ಆಯ್ತು? ಇಂತಹ ಹಲವು ಪ್ರಶ್ನೆಗಳಿವೆ. ಇದ್ಯಾವುದರ ಬಗ್ಗೆಯೂ ಕೇಂದ್ರ ಸರ್ಕಾರ ಮಾತನಾಡ್ತಿಲ್ಲ ಅಂತ ಪ್ರಶ್ನೆಗಳ ಮಳೆಸುರಿಸಿದರು.

ಇತ್ತ ಚಿದರಂಬರಂ ಹೇಳಿಕೆ ಬೆನ್ನಲ್ಲೇ ಕೇಸರಿ ಪಡೆ ಕೆರಳಿ ಕೆಂಡವಾಗಿದೆ. ಚಿದರಂಬರಂ ಪಾಕಿಸ್ತಾನವನ್ನ ನಿರಂತರವಾಗಿ ಏಕೆ ಸಮರ್ಥನೆ ಮಾಡಿಕೊಳ್ತಿದ್ದಾರೆ? ವಿಶ್ವದಲ್ಲೇ ಅತಿಹೆಚ್ಚು ಭಯೋತ್ಪಾದನೆ ರಫ್ತು ದೇಶದ ವಿರುದ್ಧ ಪ್ರಶ್ನೆಗಳನ್ನು ಎತ್ತದ ಕಾಂಗ್ರೆಸ್‌, ತನ್ನ ದೇಶದ ಭದ್ರತಾ ಸಂಸ್ಥೆಗಳನ್ನೇ ಏಕೆ ಪ್ರಶ್ನಿಸುತ್ತೆ? ಚಿದಂಬರಂ ತಮ್ಮ ಹೇಳಿಕೆ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡಲು ಹೊರಟಿದ್ದಾರೆ. ನಮ್ಮ ದೇಶದ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗಿಂತ ಐಎಸ್‌ಐ ಅನ್ನೇ ಹೆಚ್ಚು ನಂಬುತ್ತೀರಾ? ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯ ದ್ವೇಷವೇ ನಿಮಗೆ ಮುಖ್ಯವಾಯ್ತಾ? ಅಂತ ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

ವಿವಾದದ ಬಳಿಕ ಚಿದಂಬರಂ ಸ್ಪಷ್ಟನೆ
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಹೇಳಿಕೆಗೆ ಚಿದಂಬರಂ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನ ತಿರುಚಲಾಗಿದೆ. ರೆಕಾರ್ಡ್‌ ಮಾಡಿದ ಸಂಪೂರ್ಣ ಸಂದರ್ಶನವನ್ನು ಮುಚ್ಚಿಟ್ಟು, ಒಂದೆರಡು ವಾಕ್ಯಗಳನ್ನ ಅಳಿಸಿದ್ದಾರೆ. ಕೆಲ ಪದಗಳನ್ನ ಮ್ಯೂಟ್‌ ಮಾಡಿದ್ದಾರೆ. ಇದು ಅತ್ಯಂತ ಕೆಟ್ಟ ಟ್ರೋಲ್‌ ಅಂತ ಹೇಳಿದ್ದಾರೆ.

ಇದನ್ನೂ ಓದಿ