ಹೊಸ ದಿಗಂತ ವರದಿ, ದಾಂಡೇಲಿ :
ವೃದ್ಧೆಯ ಗಮನವನ್ನು ಬೇರೆಡೆಗೆ ಸೆಳೆದು ಲಕ್ಷಾಂತರ ರೂ ಮೌಲ್ಯದ ಬಂಗಾರದ ಆಭರಣವನ್ನು ಇಬ್ಬರೂ ಖದೀಮರು ದೋಚಿದ ಘಟನೆ ದಾಂಡೇಲಿ ನಗರದ ಕೇಂದ್ರ ಅಂಚೆ ಕಚೇರಿಯ ಮುಂಭಾಗದ ಬರ್ಚಿ ರಸ್ತೆಯಲ್ಲಿ ನಡೆದಿದ೩.
ನಗರದ ಬಂಗೂರನಗರ ಓಲ್ಡ್ ಡಿ.ಆರ್.ಟಿ ಕಾಲೋನಿಯ ನಿವಾಸಿ ಶಾಂತ ಯಲ್ಲಪ್ಪ ಪವಾರ್ ಎಂಬ 85 ವರ್ಷ ವಯಸ್ಸಿನ ಮಹಿಳೆಯೆ ಬಂಗಾರದ ಆಭರಣವನ್ನು ಕಳೆದುಕೊಂಡ ವೃದ್ಧೆಯಾಗಿದ್ದಾರೆ. ಇವರು ವೈಯಕ್ತಿಕ ಕೆಲಸದ ನಿಮಿತ್ತ ಬರ್ಚಿ ರಸ್ತೆಯಲ್ಲಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಬೈಕಿನಲ್ಲಿ ಬಂದ ಇಬ್ಬರು ಖದೀಮರು ಇವರ ಗಮನವನ್ನು ಬೇರೆಡೆ ಸೆಳೆದು ಎರಡು ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಬಂಗಾರದ ಎರಡು ಬಳೆಗಳನ್ನು ಎಗರಿಸಿದ್ದಾರೆ. ಈ ಇಬ್ಬರು ಖದೀಮರ ಚಲನವಲನ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಠಾಣೆಯ ಪೊಲೀಸರು ಈ ಇಬ್ಬರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.