ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಆಯ್ದ 100 ಜಿಲ್ಲೆಗಳಲ್ಲಿ ಜಾರಿಯಾಗುತ್ತಿರುವ ಮಹತ್ವಕಾಂಕ್ಷೆಯ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ ಕರ್ನಾಟಕದ ಹಾವೇರಿ ಮತ್ತು ಗದಗ ಜಿಲ್ಲೆಗಳು ಸೇರ್ಪಡೆಗೊಂಡಿವೆ. ಈ ಮೂಲಕ ಕೃಷಿ ಅಭಿವೃದ್ಧಿ ಹಾಗೂ ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಉಭಯ ಜಿಲ್ಲೆಗಳಿಗೆ ಬಂಪರ್ ಕೊಡುಗೆ ನೀಡಿದೆ.
ಯೋಜನೆಯ ಪ್ರಮುಖ ಉದ್ದೇಶಗಳು:
- ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು.
- ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು.
- ಅಲ್ಪಾವಧಿ ಹಾಗೂ ದೀರ್ಘಾವಧಿ ಹಣಕಾಸು ನೆರವು ನೀಡುವುದು.
- ಪ್ರತಿ ಪಂಚಾಯತ್ ಮತ್ತು ಬ್ಲಾಕ್ ಕೇಂದ್ರಗಳಲ್ಲಿ ದಾಸ್ತಾನು ಘಟಕಗಳ ನಿರ್ಮಾಣ ಮಾಡುವುದು.
ಇಂದು ಯೋಜನೆಗೆ ಚಾಲನೆ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವರ್ಚ್ಯುವಲ್ ಮೂಲಕ ದೇಶದಾದ್ಯಂತ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರ ಭಾಗವಾಗಿ ಹಾವೇರಿ ಜಿಲ್ಲೆಯ ಹನುಮನಹಟ್ಟಿಯಲ್ಲಿರುವ ಕೃಷಿ ವಿದ್ಯಾಲಯ ಕೇಂದ್ರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಧನ ಧಾನ್ಯ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಿಂದ ಹಾವೇರಿ ಮತ್ತು ಗದಗ ಜಿಲ್ಲೆಗಳ ರೈತರಿಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆ.