Saturday, October 11, 2025

ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಬಾಂಬೆ ಮಾದರಿಯಲ್ಲಿ ಸಮಿತಿ: ಡಿಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಂಬೆ ಮಾದರಿಯಲ್ಲಿ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕಾಗಿ ವಿಶೇಷ ಸಮಿತಿ ರಚಿಸಲು ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ನಗರದ ವಾಸಸ್ಥಳ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ರೂಪ ನೀಡುವ ಯತ್ನ ಪ್ರಾರಂಭವಾಗಿದೆ.

ಶುಕ್ರವಾರ ಜಿಬಿಎ ಸಭಾಂಗಣದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮೊದಲ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನಗರದಲ್ಲಿನ 480 ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ಈ ಹಿಂದೆ ಶಾಂತಿನಗರದಲ್ಲಿ ಇದೇ ಮಾದರಿಯಲ್ಲಿ ಪ್ರಯತ್ನ ಮಾಡಿದ್ದೆವು, ಆದರೆ ಯಶಸ್ವಿಯಾಗಲಿಲ್ಲ. ಹೀಗಾಗಿ ಜನರಲ್ಲಿ ವಿಶ್ವಾಸ ಮೂಡಿಸಲು ಹೊಸ ಸಮಿತಿ ರಚಿಸಬೇಕು, ಎಂದು ಸೂಚನೆ ನೀಡಿದರು.

ನಗರದ ಕಸದ ಸಮಸ್ಯೆಯ ಕುರಿತು ಶಾಸಕ ಎ.ಸಿ. ಶ್ರೀನಿವಾಸ್ ಪ್ರಶ್ನಿಸಿದಾಗ, ಡಿಸಿಎಂ ಪ್ರತಿಕ್ರಿಯಿಸಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 33 ಪ್ಯಾಕೇಜ್ ಟೆಂಡರ್‌ಗಳನ್ನು ಕರೆಯಲಾಗುತ್ತಿದೆ. ನ್ಯಾಯಾಲಯದ ತೀರ್ಪಿನ ನಂತರ ಈ ಪ್ರಕ್ರಿಯೆ ಮುಂದುವರಿಯಲಿದೆ. ಕಸ ವಿಲೇವಾರಿ ಪಾಲಿಕೆಗಳ ಹೊಣೆ, ಆದರೆ ಅದರ ಸಂಯೋಜನೆಯನ್ನು ಜಿಬಿಎ ನಿಭಾಯಿಸುತ್ತದೆ, ಎಂದು ವಿವರಿಸಿದರು.

ಆನೇಕಲ್ ಪ್ರದೇಶವನ್ನು ಜಿಬಿಎ ವ್ಯಾಪ್ತಿಗೆ ಸೇರಿಸುವ ಕುರಿತು ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಘೋಷಣೆಗೊಂಡ ವ್ಯಾಪ್ತಿಯಲ್ಲೇ ಮೊದಲಿಗೆ ಚುನಾವಣೆ ನಡೆಯಲಿದೆ. ನಂತರ ಅಭಿವೃದ್ಧಿ ಹೊಂದಿರುವ ಪ್ರದೇಶಗಳನ್ನು ಹಂತ ಹಂತವಾಗಿ ಸೇರಿಸಲಾಗುವುದು. ಆದರೆ ಇಡೀ ಆನೇಕಲ್ ಸೇರಿಸುವುದು ಕಷ್ಟ, ಎಂದರು.

ಬೀದಿ ವ್ಯಾಪಾರಿಗಳ ಸಮಸ್ಯೆ ಪರಿಹಾರ ಕುರಿತು ಅವರು, 30 ಸಾವಿರ ಬೀದಿ ವ್ಯಾಪಾರಿಗಳನ್ನು ನೋಂದಣಿ ಮಾಡಲಾಗಿದೆ. ಅವರಿಗೆ ನಾಲ್ಕು ರೀತಿಯ ವಾಹನಗಳನ್ನು ನೀಡುವ ಯೋಜನೆ ತಯಾರಾಗಿದೆ. ಈ ವಾಹನಗಳ ಮೂಲಕ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು, ಎಂದು ಹೇಳಿದರು.

ಅದೇ ರೀತಿ, ಅನಾಥ ವಾಹನಗಳ ಸಮಸ್ಯೆ ಕುರಿತು ಶಾಸಕರ ಮನವಿಗೆ ಪ್ರತಿಕ್ರಿಯಿಸಿ, ನಗರದ ಹೊರವಲಯದಲ್ಲಿ 10 ಎಕರೆ ಪ್ರದೇಶ ಗುರುತಿಸಿ, ಅಲ್ಲಿ ಈ ವಾಹನಗಳನ್ನು ಸ್ಥಳಾಂತರಿಸಲಾಗುವುದು. ಕಳ್ಳತನ ಭೀತಿ ತಪ್ಪಿಸಲು ಕಾಂಪೌಂಡ್ ನಿರ್ಮಿಸಲಾಗುವುದು, ಎಂದು ಹೇಳಿದರು.

error: Content is protected !!