Saturday, October 11, 2025

VIRAL | ಮನುಷ್ಯ ಯಾಕೆ ಇಷ್ಟೊಂದು ಕ್ರೂರಿಯಾಗ್ತಿದ್ದಾನೆ? ಒಂದಿಷ್ಟು ಮಾನವೀಯತೆಯೂ ಉಳಿದಿಲ್ವಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ನೋ ನಗರದ ಜನರಲ್ಲಿ ಆಘಾತ ಮೂಡಿಸಿದ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ. ಮಾನವೀಯತೆ ನಶಿಸುತ್ತಿದೆ ಎನ್ನುವಂತ ಈ ಘಟನೆ ಲಕ್ನೋದ ಉದ್ಯಾನವನದಲ್ಲಿ ನಡೆದಿದೆ. ನೇಣುಬಿಗಿದ ಸ್ಥಿತಿಯಲ್ಲಿ ಹೇಸರಗತ್ತೆ (Mule) ಪತ್ತೆಯಾಗಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ.

ಏನಿದು ಘಟನೆ? :
ಲಕ್ಷ್ಮಣ್ ಪಾರ್ಕ್ ಬಳಿ ವಾಯುವಿಹಾರಕ್ಕೆ ಬಂದ ಸ್ಥಳೀಯರು, ಮರಕ್ಕೆ ನೇತಾಡುತ್ತಿದ್ದ ಹೇಸರಗತ್ತೆಯ ಮೃತದೇಹವನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಅವರು ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದು, ಪುರಸಭೆ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪ್ರಾಣಿ ಕಲ್ಯಾಣ ಸಂಸ್ಥೆ ಆಸ್ರಾ ದಿ ಹೆಲ್ಪಿಂಗ್ ಹ್ಯಾಂಡ್ಸ್ ಸದಸ್ಯರು ಕೂಡ ಸ್ಥಳಕ್ಕೆ ತೆರಳಿ ಘಟನೆಯ ವಿವರ ಸಂಗ್ರಹಿಸಿದರು.

ಸಂಸ್ಥೆಯ ಸದಸ್ಯೆ ಚಾರು ಖರೆ ಅವರ ಪ್ರಕಾರ, ಬೆಳಗ್ಗೆ 9 ಗಂಟೆ ಸುಮಾರಿಗೆ ಮಾಹಿತಿ ಬಂದ ತಕ್ಷಣವೇ ತಂಡ ಸ್ಥಳಕ್ಕೆ ಆಗಮಿಸಿತು. ಸುಮಾರು ಎರಡು ಗಂಟೆಗಳ ಕಾಲ ಪ್ರಾಣಿಯ ಶವ ಬಟ್ಟೆಯ ಕುಣಿಕೆಯಿಂದ ನೇತುಹಾಕಲಾಗಿತ್ತು ಎಂಬುದು ಕಂಡುಬಂದಿದೆ. ಬಳಿಕ ಎನ್‌ಜಿಒ ಘಟನೆಯ ಬಗ್ಗೆ ಲಕ್ನೋ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಪುರಸಭೆಯ ತಂಡವು ಸ್ಥಳಕ್ಕೆ ಬಂದು ಶವವನ್ನು ವಶಕ್ಕೆ ಪಡೆದು ಅಗತ್ಯ ಕ್ರಮಗಳನ್ನು ಕೈಗೊಂಡಿತು.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಾಣಿಹಿಂಸೆಯ ಆರೋಪದಡಿ ತನಿಖೆ ಆರಂಭಿಸಿದ್ದಾರೆ. ಮಹಾನಗರ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಾಣಿ ಹಿಂಸೆ ಹಾಗೂ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ. 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11(1)(f) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

error: Content is protected !!