ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಟೆನ್ನೀಸೀ ರಾಜ್ಯದಲ್ಲಿರುವ ಯುದ್ಧ ಸಾಮಗ್ರಿ ತಯಾರಿಕಾ ಸ್ಥಾವರದಲ್ಲಿ ಶುಕ್ರವಾರ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 19 ಮಂದಿ ಸಾವನ್ನಪ್ಪಿರುವ ಆತಂಕ ಎದುರಾಗಿದೆ.
ಯುಎಸ್ ಮಿಲಿಟರಿಗಾಗಿ ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ತಯಾರಿಸಿ, ಪರೀಕ್ಷಿಸುವ ಸ್ಥಳವಾಗಿದ್ದ ಅಕ್ಯುರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಕಂಪನಿಗೆ ಸೇರಿದ 1,300 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಈ ದುರಂತ ಸಂಭವಿಸಿದೆ. ಎಂಟು ಕಟ್ಟಡಗಳನ್ನು ಹೊಂದಿರುವ ಈ ಸ್ಥಾವರದಲ್ಲಿನ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಇಡೀ ಕಟ್ಟಡವೇ ನಾಮಾವಶೇಷವಾಗಿದೆ ಮತ್ತು ಕಿಲೋಮೀಟರ್‌ಗಟ್ಟಲೆ ದೂರದವರೆಗೂ ಭಾರೀ ಕಂಪನದ ಅನುಭವವಾಗಿದೆ.
ಘಟನೆಯ ತೀವ್ರತೆಗೆ ಸ್ಥಾವರದ ಹತ್ತಿರದಲ್ಲಿದ್ದ ಮನೆಗಳು ಸಹ ನಡುಗಿ ಹೋಗಿವೆ. ಘಟನೆಯ ಕುರಿತು ಮಾಹಿತಿ ನೀಡಿದ ಹಂಫ್ರೀಸ್ ಕೌಂಟಿ ಶೆರಿಫ್ ಕ್ರಿಸ್ ಡೇವಿಸ್ ಅವರು, “ಹೇಳಲು ಏನೂ ಉಳಿದಿಲ್ಲ. ಎಲ್ಲವೂ ಭಸ್ಮವಾಗಿವೆ,” ಎಂದು ದುರಂತದ ಭೀಕರತೆಯನ್ನು ವಿವರಿಸಿದ್ದಾರೆ. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ನಿಖರ ಕಾರಣದ ಬಗ್ಗೆ ಇನ್ನೂ ತಿಳಿದುಬಂದಿಲ್ಲ.