Saturday, October 11, 2025

ಡಿಕೆಶಿ ‘ವಾಕ್ ಆ್ಯಂಡ್ ಟಾಕ್’ ಶುರು: ಲಾಲ್ ​ಬಾಗ್ ಗೆ CCTV ಕವಚ, ಕಸ ಎಸೆಯುವವರಿಗೆ ‘ದಂಡದ ಪೆಟ್ಟು’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನ ಜನರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮಕ್ಕೆ ಲಾಲ್​ಬಾಗ್​ನಲ್ಲಿ ಚಾಲನೆ ನೀಡಿದ್ದಾರೆ. ಮುಂದಿನ 6 ದಿನಗಳವರೆಗೆ 6 ಪ್ರಮುಖ ಉದ್ಯಾನಗಳಲ್ಲಿ ಬೆಳಿಗ್ಗೆ ಒಂದು ತಾಸು ನಡಿಗೆ ಮತ್ತು ನಂತರ ಒಂದು ತಾಸು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಇಂದಿನ ಲಾಲ್​ಬಾಗ್ ನಡಿಗೆಯಲ್ಲಿ ಡಿಸಿಎಂ ಜೊತೆ ಸಾರ್ವಜನಿಕರು ಭಾಗವಹಿಸಿ, ನಗರದ ಮುಖ್ಯ ಸಮಸ್ಯೆಗಳಾದ ಹಾಳಾದ ರಸ್ತೆಗಳು, ಕಸದ ಸಮರ್ಪಕ ವಿಲೇವಾರಿ, ಆ್ಯಂಬುಲೆನ್ಸ್​ ಸಂಚಾರಕ್ಕೆ ಅನುಕೂಲ ಮತ್ತು ಉದ್ದೇಶಿತ ಟನಲ್ ರಸ್ತೆಯ ಬಗ್ಗೆ ಚರ್ಚೆ ನಡೆಸಿದರು.

ಕಸಕ್ಕೆ ದಂಡ, ಲಾಲ್​ಬಾಗ್​ಗೆ ಸಿ.ಸಿ.ಟಿ.ವಿ. ಭರವಸೆ:

ರಾಜ್ಯದಲ್ಲಿ ಕಸದ ಸಮಸ್ಯೆ ಹೆಚ್ಚುತ್ತಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಕಠಿಣ ದಂಡ ವಿಧಿಸುವಂತೆ ಸಾರ್ವಜನಿಕರು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಲಾಲ್​ಬಾಗ್​ನಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದರಿಂದ ಅವರ ಸುರಕ್ಷತೆಗೆ ಸಿ.ಸಿ. ಕ್ಯಾಮೆರಾಗಳ ಅವಶ್ಯಕತೆ ಇದೆ. ಆದ್ದರಿಂದ ಲಾಲ್​ಬಾಗ್ ಅಭಿವೃದ್ಧಿಗೆ ವೈಯಕ್ತಿಕವಾಗಿ ₹10 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.

ಈ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಮೂಲಕ ಜನರ ಅಹವಾಲುಗಳನ್ನು ನೇರವಾಗಿ ಆಲಿಸಿ, ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಡಿಸಿಎಂ ನೀಡಿದ್ದಾರೆ.

error: Content is protected !!